News Karnataka Kannada
Sunday, May 19 2024
ಕರಾವಳಿ

ಸಿಪಿಐ(ಎಂ) ಪಕ್ಷದ 252 ಮಂದಿ ರಾಜೀನಾಮೆ

Photo Credit :

ಸಿಪಿಐ(ಎಂ) ಪಕ್ಷದ 252 ಮಂದಿ ರಾಜೀನಾಮೆ

ಬೆಳ್ತಂಗಡಿ: ಸಿಪಿಐ(ಎಂ) ಪಕ್ಷದ ಜಿಲ್ಲಾ ನೇತೃತ್ವದ ಕಾರ್ಯ ವೈಖರಿ ವಿರೋಧಿಸಿ ಬಿ.ಎಂ. ಭಟ್ ಹಾಗೂ ಇತರರನ್ನು ಪಕ್ಷದಿಂದ ಉಚ್ಛಾಟಿಸಿರುವ ಕ್ರಮವನ್ನು ವಿರೋಧಿಸಿ ಬೆಳ್ತಂಗಡಿ ತಾಲೂಕಿನ ಸಿಪಿಐಎಂ ಪಕ್ಷದ 29 ಶಾಖೆಗಳ 252 ಮಂದಿ ಸದಸ್ಯರು ಪಕ್ಷದ ಜಿಲ್ಲಾ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ ಭಟ್ ತಿಳಿಸಿದ್ದಾರೆ.

ಅವರು, ಗುರುವಾರ ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ವಿಚಾರ ತಿಳಿಸಿದರು. ತಾಲೂಕಿನಲ್ಲಿ ಪಕ್ಷದ 29 ಶಾಖೆಗಳಿದ್ದು, ಒಟ್ಟು 323 ಮಂದಿ ಸದಸ್ಯರುಗಳಿದ್ದಾರೆ. ಇವರಲ್ಲಿ 252 ಜನ ಇದೀಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಮುಂದೆ ತೆಗೆದುಕೊಳ್ಳಲಿರುವ ರಾಜಕೀಯ ನಿಲುವುಗಳ ಬಗ್ಗೆ ಎಪ್ರಿಲ್ 10ರಂದು ಬೆಳ್ತಂಗಡಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.

ಸಿಐಟಿಯುವಿನಲ್ಲಿ ಹಾಗೂ ಬೀಡಿ ಕಾರ್ಮಿಕರ ಸಂಘಟನೆಯಲ್ಲಿ ಲೆಕ್ಕ ಕೇಳಿದ್ದೇ ತನ್ನ ವಿರುದ್ದದ ವಿರೋಧಕ್ಕೆ ಕಾರಣ ಎಂದು ವಿವರಿಸಿದ ಬಿ.ಎಂ. ಭಟ್ ಅವರು, ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ನಿಯಂಯತ್ರಿಸುತ್ತಿರುವ ಕೆ. ಆರ್. ಶ್ರೀಯಾನ್ ಹಾಗೂ ಜೆ. ಬಾಲಕೃಷ್ಣ ಶೆಟ್ಟಿ ಅವರು ಸೇರಿ ಪಕ್ಷವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಅವರ ವಿರುದ್ದ ತಮ್ಮ ಹೋರಾಟವೇ ಹೊರತು ಪಕ್ಷದ ವಿರುದ್ದ ಅಲ್ಲ ಎಂದ ಅವರು ಜಿಲ್ಲಾ ಸಮಿತಿಗೆ ರಾಜೀನಾಮೆಯನ್ನು ನೀಡಿದ್ದು, ಎಲ್ಲರ ಸದಸ್ಯತ್ವವನ್ನು ನವೀಕರಿಸುವಂತೆ ರಾಜ್ಯ ಸಮಿತಿಗೆ ಮನವಿ ಸಲ್ಲಿಸಲಾಗುವುದು. ಈ ಮೂವರು ನಾಯಕರನ್ನು ಹೊರಗಿಡಲು ಒಪ್ಪಿದರೆ ಮಾತ್ರ ಪಕ್ಷದೊಂದಿಗೆ ಮುಂದುವರಿಯಲು ಸಾಧ್ಯ ಎಂದರು.

ಜಿಲ್ಲೆಯಲ್ಲಿ ಸಿಪಿಐಎಂ ಪಕ್ಷ ಬೀಡಿ ಕಂಪೆನಿಗಳ ಮಾಲಕರುಗಳ ಅಡಿಯಾಳುಗಳಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ಅವರು, ಬೀಡಿ ಮಾಲಕರ ಇಚ್ಛೆಯಂತೆ ಹಲವರನ್ನು ಪಕ್ಷ ಹೊರಹಾಕಿದೆ. ಇದರ ಮುಂದುವರಿದ ಭಾಗವಾಗಿಯೇ ಬೆಳ್ತಂಗಡಿಯಲ್ಲಿಯೂ ನಾಯಕರುಗಳನ್ನು ಉಚ್ಛಾಟಿಸಲಾಗುತ್ತದೆ ಎಂದರು. ತನ್ನ ಮೇಲಿರುವ ಹಣದ ಅವ್ಯವಹಾರದ ಬಗೆಗಿನ ಆರೋಪಗಳಿಗೆ ಉತ್ತರಿಸಿದ ಅವರು ವಿವಿಧ ಸಂಘಟನೆಗಳಿಂದ ಸಂಗ್ರಹವಾಗಿದ್ದ ಏಳು ಲಕ್ಷ ರೂ ಹಣ ಮನೆಯಿಂದ ಕಳ್ಳತನವಾಗಿತ್ತು. ಆದರೂ ಬ್ಯಾಂಕಿನಲ್ಲಿ ಸಾಲ ಮಾಡಿ ಆ ಎಲ್ಲ ಹಣವನ್ನೂ ಪಕ್ಷಕ್ಕೆ ಹಿಂತಿರುಗಿಸಿದ್ದೇನೆ. ಮತ್ತೆ ಆರೋಪ ಮಾಡುವುದರಲ್ಲಿ ಯಾವ ಅರ್ಥವಿದೆ ಎಂದು ಪ್ರಶ್ನಿಸಿದರು.

ಈ ಬಾರಿ ಬೆಳ್ತಂಗಡಿಯಲ್ಲಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಬಿ. ಎಂ. ಭಟ್ ಅವರು, ಮುಂದಿನ ರಾಜಕೀಯ ನಿಲುವುಗಳ ಬಗ್ಗೆ ರಾಜ್ಯದ ಸಮಾನ ಮನಸ್ಕ ನಾಯಕರುಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಸಿಪಿಐಎಂ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ಈ ಸ್ಪರ್ಧೆಯಿಂದಾಗಿ ಕೋಮುವಾದಿ ಶಕ್ತಿಗಳಿಗೆ ಪ್ರಯೋಜನವಾಗಲಿದೆ. ಈ ವಿಚಾರವನ್ನು ಈ ಹಿಂದೆಯೇ ತಿಳಿಸಿದ್ದೆವು ಎಂದು ಅವರು ವಿವರಿಸಿದರು.

ನಮ್ಮದು ಕಮ್ಯೂನಿಸ್ಟ್ ಹೋರಾಟ ಎಂದ ಅವರು, ಅದು ನಿರಂತರವಾಗಿ ಮುಂದುವರಿಯುತ್ತದೆ. ತಾಲೂಕಿನಲ್ಲಿರುವ ಸ್ವಸಹಾಯ ಸಂಘಗಳು, ಬೀಡಿ ಕಾರ್ಮಿಕರ ಸಂಘ ಹಾಗೂ ಇತರೆ ಎಲ್ಲ ಕಾರ್ಮಿಕ ಸಂಘಟನೆಗಳು ತಮ್ಮೊಂದಿಗಿದೆ ಎಂದು ತಿಳಿಸಿದರು. ಮುಂದೆ ಯಾರೊಂದಿಗೆ ಸೇರಿಕೊಂಡು ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಲಕ್ಷ್ಮಣ ಗೌಡ ಪಾಂಗಳ, ನಾರಾಯಣ ಕೈಕಂಬ, ನೆಬಿಸ, ಜಯರಾಮ ಮಯ್ಯ, ಶ್ಯಾಮರಾಜ್ ಪಟ್ರಮೆ, ಲೋಕೇಶ್ ಕುದ್ಯಾಡಿ, ದೇವಕಿ, ಸಂಜೀವ ನಾಯ್ಕ, ಡೊಂಬಯ್ಯ ಗೌಡ, ಮಹಮ್ಮದ್ ಅಂಸ್, ಧನಂಜಯ ಗೌಡ, ವಿಠಲ ಮಲೆಕುಡಿಯ, ನೀಲೇಶ್ ಪೆರಿಂಜೆ ಹಾಗೂ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು