News Karnataka Kannada
Sunday, April 28 2024
ಬೀದರ್

ಬೀದರ್: ಹಾರಾಟ ನಿಲ್ಲಿಸಿದ ‘ಸ್ಟಾರ್‌ ಏರ್‌’ ವಿಮಾನ

Star Air flight stops flying in Bidar
Photo Credit : News Kannada

ಬೀದರ್: ಬೀದರ್‌-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಏಕಮಾತ್ರ ವಿಮಾನ ಸೇವೆ ರದ್ದುಗೊಂಡಿದೆ. ಬೀದರ್‌-ಬೆಂಗಳೂರು ಹಾಗೂ ಬೆಂಗಳೂರು-ಬೀದರ್‌ ನಡುವೆ ನಿತ್ಯ ‘ಸ್ಟಾರ್‌ ಏರ್‌’ ವಿಮಾನ ಸಂಚರಿಸುತ್ತಿತ್ತು. ಕಂಪನಿ ಜೊತೆಗಿನ ಒಪ್ಪಂದದ ಅವಧಿ ಇನ್ನೂ ಪೂರ್ಣಗೊಂಡಿಲ್ಲ.

ಆದರೆ, ಅದಕ್ಕೂ ಮುನ್ನವೇ ವಿಮಾನ ಹಾರಾಟ ನಿಲ್ಲಿಸಲಾಗಿದೆ. ಸೋಮವಾರ ಕೊನೆಯ ಹಾರಾಟ ನಡೆಸಿದ ವಿಮಾನ, ಮಂಗಳವಾರದಿಂದ ಹಾರಾಟ ನಿಲ್ಲಿಸಿದೆ.

ಕಂಪನಿಗೆ ನಷ್ಟ ಉಂಟಾಗುತ್ತಿದ್ದ ಕಾರಣಕ್ಕೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ. 2023ನೇ ಸಾಲಿನಲ್ಲಿ ಬೀದರ್‌-ಬೆಂಗಳೂರು ನಡುವೆ ‘ಸ್ಟಾರ್‌ ಏರ್‌’ ವಿಮಾನದ ಮೂಲಕ ಒಟ್ಟು 10,950 ಜನ ಪ್ರಯಾಣ ಮಾಡಿದ್ದಾರೆ. ಇದು ರಾಜ್ಯದ ಇತರೆ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಅತಿ ಕಡಿಮೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲನೇ ಸ್ಥಾನದಲ್ಲಿದೆ. ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ನಂತರದ ಸ್ಥಾನದಲ್ಲಿವೆ. ಬೀದರ್‌ ವಿಮಾನ ನಿಲ್ದಾಣವನ್ನು ವಾಯುಸೇನಾ ತರಬೇತಿ ನೆಲೆಯಲ್ಲಿ ಆರಂಭಿಸಲಾಗಿತ್ತು. ಆರಂಭದಲ್ಲಿ ನಾಗರಿಕ ವಿಮಾನಯಾನಕ್ಕೆ ಸಾಕಷ್ಟು ತೊಡಕುಗಳು ಎದುರಾಗಿದ್ದವು. ಆದರೆ, ಈ ಹಿಂದಿನ ಜಿಲ್ಲಾಧಿಕಾರಿ ಹರ್ಷ ಗುಪ್ತಾ, ಅಂದಿನ ಸಂಸದ ಎನ್‌.ಧರ್ಮಸಿಂಗ್‌ ಅವರು ವಿಶೇಷ ಮುತುವರ್ಜಿ ವಹಿಸಿ ಅನುಮತಿ ಪಡೆದುಕೊಂಡಿದ್ದರು. ನಂತರ ಹಾಲಿ ಸಂಸದ ಭಗವಂತ ಖೂಬಾ ಕೂಡ ಅದನ್ನು ಮುಂದುವರಿಸಿ, ‘ಸ್ಟಾರ್‌ ಏರ್‌’ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಸಿ, ಬೆಂಗಳೂರು, ತಿರುಪತಿಗೆ ಸೇವೆಗೆ ವಿಸ್ತರಿಸಿದ್ದರು. ಆದರೆ, ಪ್ರಯಾಣಿಕರ
ಕೊರತೆಯಿಂದ ಈಗ ಕಂಪನಿ ವಿಮಾನ ಸೇವೆ ಸ್ಥಗಿತಗೊಳಿಸಿದ್ದು, ಈಗ ಮುಂದೇನು ಎಂಬುದು ಸಾರ್ವಜನಿಕರ ಪ್ರಶ್ನೆ.

‘ಸ್ಟಾರ್‌ ಏರ್‌’ ಕಂಪನಿಯು ಬೀದರ್‌-ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭಿಸಿದ ನಂತರ ಜನ ಖುಷಿ ಪಟ್ಟಿದ್ದರು. ಅಂತಹವರಲ್ಲಿ ನಾನು ಕೂಡ ಒಬ್ಬ. ಆದರೆ, ಆರಂಭದಿಂದಲೂ ನಿರ್ದಿಷ್ಟ ದಿನಗಳಂದು ವಿಮಾನ ಸಂಚರಿಸಲೇ ಇಲ್ಲ. ಯಾವಾಗ ಸಂಚರಿಸುತ್ತದೆ ಯಾವಾಗ ರದ್ದಾಗುತ್ತದೆ ಎನ್ನುವುದೇ ಗೊತ್ತಾಗಲಿಲ್ಲ. ಹೀಗಿರುವಾಗ ಯಾರು ತಾನೇ ಸಮಯ ವ್ಯರ್ಥ ಮಾಡಿಕೊಂಡು ವಿಮಾನ ಸಂಚರಿಸುತ್ತದೆಯೋ ಇಲ್ಲವೋ ಎಂದು ತಿಳಿಯಲು ಪ್ರಯತ್ನಿಸುತ್ತಾರೆ. ಸಮೀಪದ ಹೈದರಾಬಾದ್‌ನಿಂದ ಕಡಿಮೆ ದರದಿಂದ ಹೆಚ್ಚಿನ ದರದ ವಿಮಾನಗಳ ಸೇವೆ ಇದೆ. ಹೀಗಿರುವಾಗ ಗೊಂದಲದಿಂದ ಕೂಡಿದ ‘ಸ್ಟಾರ್‌ ಏರ್’ ಕಂಪನಿಯ ವಿಮಾನದ ಮೂಲಕ ಯಾರು ತಾನೇ ಸಂಚರಿಸಲು ಇಷ್ಟಪಡುತ್ತಾರೆ’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಪ್ರಶ್ನಿಸಿದರು.

ವಿಮಾನ ರದ್ದಾಗಲು ಕಾರಣವೇನು?: ‘ಉಡಾನ್‌’ ಯೋಜನೆ ವ್ಯಾಪ್ತಿಗೆ ಬೀದರ್‌ ವಿಮಾನ ನಿಲ್ದಾಣ ಸೇರಿಸಿ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿತ್ತು. ಆರಂಭದಲ್ಲಿ ಎಲ್ಲವೂ ಅದರಂತೆ ನಡೆಯಿತು. ಆದರೆ ಬರ ಬರುತ್ತ ದರದಲ್ಲಿ ಏರಿಕೆ ಉಂಟಾಯಿತು.

ದುಬಾರಿ ಟಿಕೆಟ್‌ನಿಂದ ಜನ ವಿಮಾನ ಸೇವೆಯ ಬದಲು ರೈಲು ಬಸ್‌ಗಳ ಮೊರೆ ಹೋದರು. ಸಮೀಪದ ಹೈದರಾಬಾದ್‌ನಿಂದ ಕಡಿಮೆ ದರದ ವಿಮಾನಗಳಲ್ಲಿ ಸಂಚರಿಸಲು ಶುರು ಮಾಡಿದರು. ಇದೆಲ್ಲ ಪ್ರಯಾಣಿಕರ ಸಂಖ್ಯೆ ತಗ್ಗಲು ಪ್ರಮುಖ ಕಾರಣ. ಇನ್ನು ವಾರದ ಎಲ್ಲ ದಿನಗಳಂದು ವಿಮಾನ ಸಂಚರಿಸಲಿದೆ ಎಂದು ಘೋಷಿಸಲಾಗಿತ್ತು. ಆದರೆ ವಾರದಲ್ಲಿ ಒಂದೆರೆಡು ದಿನಗಳಿಗೆ ಮಾತ್ರ ಸೇವೆ ಸೀಮಿತವಾಗಿತ್ತು. ವಿಮಾನ ಯಾವಾಗ ಸಂಚರಿಸುತ್ತದೆ. ಯಾವಾಗ ರದ್ದು ಆಗುತ್ತದೆ ಎಂಬ ಗೊಂದಲದಲ್ಲಿ ಆ ಕಡೆ ಜನ ಮುಖವೇ ಮಾಡಲಿಲ್ಲ. ಬೀದರ್‌ನಿಂದ 150 ಕಿ.ಮೀ ದೂರದಲ್ಲಿ ತೆಲಂಗಾಣದ ರಾಜಧಾನಿ ಹೈದರಾಬಾದ್‌ 120 ಕಿ.ಮೀ ದೂರದಲ್ಲಿ ಕಲಬುರಗಿ ನಗರ ಇದೆ. ಹೈದರಾಬಾದ್‌ನಿಂದ ಹಲವು ದೇಶಗಳಿಗೆ ವಿಮಾನ ಸೇವೆ ಇದೆ.

ಕಲಬುರಗಿಯಿಂದಲೂ ವಿಮಾನಗಳು ಸಂಚರಿಸುತ್ತಿವೆ. ಜನ ಆ ಕಡೆಗೆ ಮುಖ ಮಾಡಿದರು. ‘ಸ್ಟಾರ್‌ ಏರ್‌’ ಬೀದರ್‌-ಬೆಂಗಳೂರು ನಡುವೆ ವಿಮಾನಯಾನ ಸೇವೆ ಆರಂಭಿಸಿದ ನಂತರದ ದಿನದಿಂದಲೂ ಅದರ ಸಮಯವನ್ನು ಬದಲಿಸಬೇಕೆಂಬ ಬೇಡಿಕೆ ಇತ್ತು. ಆದರೆ ಅದಕ್ಕೆ ಸ್ಪಂದಿಸುವ ಕೆಲಸವೇ ಆಗಲಿಲ್ಲ. ಸಂಜೆ ಬದಲು ಬೆಳಿಗ್ಗೆ ಬೀದರ್‌ನಿಂದ ಬೆಂಗಳೂರಿಗೆ ಸಂಜೆ ಬೆಂಗಳೂರಿನಿಂದ ಬೀದರ್‌ ಕಡೆಗೆ ವಿಮಾನ ಹಾರಾಟ ನಡೆಸಬೇಕು ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಉದ್ಯಮಿಗಳು ಮನವಿ ಮಾಡಿದ್ದರು. ಅವರ ಮನವಿಗೆ ಕಿವಿಗೊಡಲಿಲ್ಲ. ಇದರ ಪರಿಣಾಮ ಏಕಮಾತ್ರ ವಿಮಾನ ಸಂಚಾರ ರದ್ದುಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು