ಹುಮನಾಬಾದ್: ಬೇಸಿಗೆ ರಜೆ ಮುಗಿದು ಶಾಲೆಗಳು ಆರಂಭವಾಗಿದೆ. ಆದರೆ ತಾಲ್ಲೂಕಿನ 69ಕ್ಕೂ ಹೆಚ್ಚು ಶಾಲೆಗಳ ಕೊಠಡಿಗಳು ಶಾಲೆಗಳು ಆರಂಭವಾದರೂ ದುರಸ್ತಿಯಾಗಿಲ್ಲ. ಇದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಪೋಷಕರನ್ನು ಚಿಂತೆಗೀಡು ಮಾಡಿದೆ.
ತಾಲ್ಲೂಕಿನಲ್ಲಿ 207 ಪ್ರಾಥಮಿಕ, 37 ಪ್ರೌಢ ಶಾಲೆಗಳಿವೆ. ಅನೇಕ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆಯಿದ್ದರೆ, ಅನೇಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮಳೆಗಾಲದಲ್ಲಿ ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಮಕ್ಕಳು ಆತಂಕದಲ್ಲೇ ಓದು ಮುಂದುವರಿಸುವ ಅನಿವಾರ್ಯ ಸೃಷ್ಟಿಯಾಗಿದೆ.
ಶಾಲೆಯ ಕಟ್ಟಡ ಹಾಳಾಗಿರುವುದು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಬೇಸಿಗೆ ರಜೆಯಲ್ಲಾದರೂ ದುರಸ್ತಿಗೊಳಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಈಡೇರಿಲ್ಲ. ಹೀಗಾಗಿ ನಮ್ಮ ಮಕ್ಕಳು ಜೀವಭಯದಲ್ಲೇ ವಿದ್ಯಾಭ್ಯಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಯ ಪಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅದರಲ್ಲಿ 69 ಕೊಠಡಿಗಳು ದುರಸ್ತಿಗೆ ಬಂದಿದ್ದು, ಬಹುತೇಕ ಇವೆಲ್ಲವೂ ಗ್ರಾಮೀಣ ಪ್ರದೇಶದ ಶಾಲೆಗಳಾಗಿವೆ. ಆದರೆ ಇನ್ನೊಂದೆಡೆ ಮಳೆಗೆ ಶಾಲಾ ಮೈದಾನಗಳು ಕೆರೆಯಾಗಿ ಮಾರ್ಪಡುತ್ತವೆ. ಇನ್ನೂ ಕೆಲವೆಡೆ ಕುಡಿಯುವ ನೀರು, ಶೌಚಾಲಯ ಇಲ್ಲದ ಶಾಲೆಗಳು ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ.