Bengaluru 22°C
Ad

ಪ್ರಸಕ್ತ ರಾಜಕಾರಣದಲ್ಲಿ ಮಹಿಳೆಯರ ಪಾತ್ರ ಸಂವಾದ ಕಾರ್ಯಕ್ರಮ

ಸಮಾಜದಲ್ಲಿ ಹೆಣ್ಣಿನ ಮೇಲೆ ಹಿಂಸಾಪ್ರವೃತ್ತಿ ಹೆಚ್ಚುತ್ತಿದೆ. ಅದು ಸಹಜ ಎನ್ನುವ ವಾತಾವರಣ ಬೇರು ಬಿಡುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್‌.ವಿಮಲಾ ಕಳವಳ ವ್ಯಕ್ತಪಡಿಸಿದರು.

ಕಲಬುರಗಿ: ಸಮಾಜದಲ್ಲಿ ಹೆಣ್ಣಿನ ಮೇಲೆ ಹಿಂಸಾಪ್ರವೃತ್ತಿ ಹೆಚ್ಚುತ್ತಿದೆ. ಅದು ಸಹಜ ಎನ್ನುವ ವಾತಾವರಣ ಬೇರು ಬಿಡುತ್ತಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್‌.ವಿಮಲಾ ಕಳವಳ ವ್ಯಕ್ತಪಡಿಸಿದರು.

ಸಮಾನ ಮನಸ್ಕರ ವೇದಿಕೆಯಿಂದ ನಗರದ ಕನ್ನಡ ಭವನದಲ್ಲಿ ಶುಕ್ರವಾರ ನಡೆದ ‘ಮಹಿಳಾ ಅಸ್ಮಿತೆ ಮತ್ತು ಪ್ರಸಕ್ತ ರಾಜಕಾರಣ ಕುರಿತ ಸಂವಾದದಲ್ಲಿ ಅವರು ವಿಷಯ ಮಂಡಿಸಿದರು.

ಗರ್ಭದಿಂದ ಗೋರಿಯವರೆಗೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪುರುಷ ಪ್ರಧಾನ ಸಮಾಜ ಮಹಿಳೆಯರ ದೇಹವನ್ನು ದಾಳ ಮಾಡಿಕೊಂಡಿದೆ. ಅದಕ್ಕೆ ಹಾಸನ ಪ್ರಕರಣವೇ ಸಾಕ್ಷಿ. ಹೆಣ್ಣುಮಕ್ಕಳ ಘನತೆಯ ಬದುಕಿನ ಮೇಲೆ ಪ್ರಜ್ವಲ್‌ ರೇವಣ್ಣ ಅತಿಕ್ರಮಣ ಮಾಡಿದ್ದಾನೆ.

ಪೆನ್‌ಡ್ರೈವ್‌ ರಕ್ತಬೀಜಾಸುರನಂತೆ ಹಂಚಿಕೆಯಾಗಿದ್ದು, ಅಲ್ಲಿ ಪ್ರಜಾಪ್ರಭುತ್ವದ ನೆರಳಿನಲ್ಲಿ ಪಾಳೇಗಾರಿಕೆ ಬೇರೂರಿದೆ. ಮಹಿಳೆಯನ್ನು ಸರಕಾಗಿ ನೋಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದರ ವಿರುದ್ಧ ಸಮಾಜ ಎದ್ದು ಪ್ರತಿಭಟಿಸಬೇಕು. ಎಲ್ಲಿಯೇ ಆಗಲಿ, ಪಾಳೇಗಾರಿಕೆ, ಪುರುಷ ಪ್ರಧಾನ ಅಂಶಗಳನ್ನು ಕಿತ್ತೊಗೆಯದಿದ್ದರೆ ಮಹಿಳೆಗೆ ಅಸ್ತಿತ್ವವೇ ಇಲ್ಲ ಎಂದು ಅವರು ಎಚ್ಚರಿಸಿದರು.

ಸಮಾಜದಲ್ಲಿ ಮಹಿಳೆ ಎನ್ನುವ ಜೀವಕ್ಕೆ ಮೌಲ್ಯವೇ ಇಲ್ಲ ಎನ್ನುವ ರೀತಿ ವರ್ತಿಸಲಾಗುತ್ತಿದೆ. ಗಂಡಾಳ್ವಿಕೆಯ ಮನಸ್ಥಿತಿಯಲ್ಲಿ ಸಮಾಜ ಇದೆ. ಮಹಿಳೆಯರ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯ ಪ್ರಶ್ನಿಸುವುದು ಕೆಲವರಿಗೆ ಸೀಮಿತ ಎನ್ನುವಂತಾಗಿದೆ. ದೌರ್ಜನ್ಯವನ್ನುಪ್ರಶ್ನಿಸುವುದು ಜನವಾದಿ ಸಂಘಟನೆಯ ಜವಾಬ್ದಾರಿ ಅಷ್ಟೇ ಅಲ್ಲ, ಸಮಾಜದ ಜವಾಬ್ದಾರಿ’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜ್ಞಾ ಕಾನೂನು ಸಲಹಾ ಸಮಿತಿ ಕಾರ್ಯದರ್ಶಿ ಕೆ.ನೀಲಾ, ‘ಚಿಂತನೆಗಳು ಬದಲಾಗದೇ ಸಮಾಜ ಬದಲಾಗಲ್ಲ. ಚಿಂತನೆಗಳು ಚಳವಳಿಯ ರೂಪ ಪಡೆಯಬೇಕು. ಚಿಂತನೆಯಿಲ್ಲದ ಚಳವಳಿ ಕುರುಡು. ಹೆಣ್ಣನ್ನು ಸರಕಾಗಿ ನೋಡುವುದು, ಗಂಡನ್ನು ಶಕ್ತಿಯಾಗಿ ನೋಡುವುದು ಮನಕ್ಕಂಟಿದ ಸೂತಕ.

ಸಮಾಜದಲ್ಲಿ ಹೆಣ್ಣುಮಕ್ಕಳ ಸಾಧನೆ ಸಹಿಸದ ವಾತಾವರಣ ಸೃಷ್ಟಿಯಾಗುತ್ತಿದೆ. ಮಹಿಳಾ ನಾಯಕತ್ವ ಒಪ್ಪದ ಮನಸ್ಥಿತಿ ಇದೆ. ಅಧಿಕಾರದ ಮದದಿಂದ ಹಾಸನದ ಘಟನೆ ನಡೆದಿದೆ. ಈ ಧಿಮಾಕಿನ ದರ್ಪ ಪ್ರಶ್ನಿಸೋಣ, ಹೆಣ್ಣನ್ನು ಬಳಸಿ ಬಿಸಾಡುವ ಸಂಸ್ಕೃತಿ ಅಳಿಸೋಣ ಎಂದು ಕರೆ ನೀಡಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಲೇಬೇಕು. ಘನತೆಯ ಬದುಕು ನಮ್ಮ ಹಕ್ಕು. ಸಮತೆಯ ನಾಡು ಕಟ್ಟೋಣ’ ಎಂಬ ಘೋಷಣೆಗಳಿಂದ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಸಂವಾದದಲ್ಲಿ ಅಂಬೇಡ್ಕರ್‌ ಪದವಿ ಕಾಲೇಜು, ಗೋದುತಾಯಿ ಎಂಜಿನಿಯರಿಂಗ್‌ ಕಾಲೇಜು, ಶರಣಬಸವ ವಿವಿಯ ಎಂಎ ವಿದ್ಯಾರ್ಥಿಗಳು, ಸರ್ಕಾರಿ ಮಹಿಳಾ ಐಟಿಐ ಕಾಲೇಜು, ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜನವಾದಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪದ್ಮಿನಿ ಕಿರಣಗಿ, ಪದ್ಮಾ ಪಾಟೀಲ, ಚಂದಮ್ಮ ಗೋಳಾ, ಡಿವೈಎಫ್‌ಐ ಸಂಘಟನೆ ಲವಿತ್ರಾ ವಸ್ತ್ರದ ಸುಜಾತಾ ಕುಸನೂರು, ಪ್ರಿಯಾಂಕಾ ಮಾವಿನಕರ್‌, ಅಂಗನವಾಡಿ ಸಂಘಟನೆಯ ಶಾಂತಾ ಘಂಟೆ,

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಪ್ರಾಧ್ಯಾ‍ಪಕ ಅರುಣ್‌ ಜೋಳದಕೂಡ್ಲಿಗಿ, ಸಂವಾದ ಸಂಘಟನೆಯ ನಾಗೇಶ, ಆಳಂದ ಎಸ್‌ಎಫ್‌ಐಸಂಚಾಲಕಿ ಮೇಘಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad