Bengaluru 23°C
Ad

ಚಾಮರಾಜನಗರ: ಬಂಡೀಪುರದ ಕೆರೆಕಟ್ಟೆಗಳಿಗೆ ಬರುತ್ತಿದೆ ಜೀವ ಕಳೆ

ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿ ಮಳೆ ಉತ್ತಮವಾಗಿ ಸುರಿದಿರುವ ಕಾರಣ ಅರಣ್ಯಕ್ಕೆ ಜೀವ ಕಳೆ ಬಂದಿದ್ದು ಕೆರೆಕಟ್ಟೆಗಳು ತುಂಬಿ ಎಲ್ಲಡೆ ನೀರಾಡುತ್ತಿದೆ. ಇಡೀ ಅರಣ್ಯ ಹಸಿರಿನಿಂದ ನಳನಳಿಸುತ್ತಿದ್ದರೆ, ಅರಣ್ಯದೊಳಗೆ ಹರಿಯುವ ನದಿಗಳಲ್ಲಿ ಜೀವಕಳೆ ಎದ್ದು ಕಾಣುತ್ತಿದೆ. ಕೆರೆಕಟ್ಟೆಗಳಲ್ಲಿ ನೀರು ಅಲೆಯಾಡುತ್ತಿದೆ. ಇದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಹರ್ಷ ತಂದಿದೆ.

ಚಾಮರಾಜನಗರ: ಜಿಲ್ಲೆಯ ಬಂಡೀಪುರ ವ್ಯಾಪ್ತಿಯಲ್ಲಿ ಮಳೆ ಉತ್ತಮವಾಗಿ ಸುರಿದಿರುವ ಕಾರಣ ಅರಣ್ಯಕ್ಕೆ ಜೀವ ಕಳೆ ಬಂದಿದ್ದು ಕೆರೆಕಟ್ಟೆಗಳು ತುಂಬಿ ಎಲ್ಲಡೆ ನೀರಾಡುತ್ತಿದೆ. ಇಡೀ ಅರಣ್ಯ ಹಸಿರಿನಿಂದ ನಳನಳಿಸುತ್ತಿದ್ದರೆ, ಅರಣ್ಯದೊಳಗೆ ಹರಿಯುವ ನದಿಗಳಲ್ಲಿ ಜೀವಕಳೆ ಎದ್ದು ಕಾಣುತ್ತಿದೆ. ಕೆರೆಕಟ್ಟೆಗಳಲ್ಲಿ ನೀರು ಅಲೆಯಾಡುತ್ತಿದೆ. ಇದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಹರ್ಷ ತಂದಿದೆ.

ಕಳೆದ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ಬೇಸಿಗೆಯಲ್ಲಿ ಬಂಡೀಪುರ ಅರಣ್ಯದಲ್ಲಿ ನೀರಿನ ಕೊರತೆಯಾಗಿದ್ದಲ್ಲದೆ, ಗಿಡಮರಗಳು ಒಣಗಿ ಹೋಗಿದ್ದವು. ಜತೆಗೆ ಮಳೆಯ ಕೊರತೆಯಿಂದಾಗಿ ಅಂತರ್ಜಲ ಕುಸಿದು, ಅರಣ್ಯದ ನಡುವಿನ ಕೆರೆಕಟ್ಟೆಗಳು ಬತ್ತಿ ಹೋಗಿದ್ದವು. ಈ ವೇಳೆ ಅರಣ್ಯದಲ್ಲಿದ್ದ ವನ್ಯ ಪ್ರಾಣಿಗಳು ನೀರನ್ನು ಅರಸಿಕೊಂಡು ತಮಿಳುನಾಡು, ಕೇರಳ, ಕಬಿನಿ ಕಡೆಗೆ ವಲಸೆ ಹೋಗಿದ್ದವು. ಕೆಲವು ಪ್ರಾಣಿಗಳು ಎಲ್ಲಿಗೂ ಹೋಗಲಾಗದೆ ಬತ್ತಿದ ಕೆರೆಗಳ ಸುತ್ತ ಗಿರಕಿ ಹೊಡೆಯುತ್ತಿದ್ದವು.

ಇದೀಗ ಮಳೆ ಸುರಿಯುತ್ತಿರುವುದರಿಂದ ವನ್ಯ ಪ್ರಾಣಿಗಳು ಖುಷಿಯಾಗಿವೆ. ಅರಣ್ಯ ಇಲಾಖೆ ಮೂಲಗಳ ಪ್ರಕಾರ ಬಂಡೀಪುರ ವಲಯದಲ್ಲಿ ಸುಮಾರು 55ಕೆರೆಗಳಿವೆ ಎನ್ನಲಾಗಿದೆ. ಬಂಡೀಪುರ ಅಭಯಾರಣ್ಯದಲ್ಲಿರುವ ಕೆರೆಗಳ ಬಗ್ಗೆ ನೋಡುವುದಾದರೆ, ಗೋಪಾಲಸ್ವಾಮಿಬೆಟ್ಟದ ವ್ಯಾಪ್ತಿಯಲ್ಲಿ 30 ಕೆರೆಗಳಿದ್ದು ಕುಂಟಬಸಪ್ಪನಕಟ್ಟೆ, ಹೊಸಕೆರೆ, ಕಾಳೀಕಟ್ಟೆ, ದೊಡ್ಡಕೆರೆ, ಚಿಗರುಮಡುವಿನಕಟ್ಟೆಗಳಿವೆ. ಮೂಲೆಹೊಳೆ ವಲಯದ 30 ಕೆರೆಗಳು, ಮೊಳೆಯೂರು ವಲಯದ 13 ಕೆರೆಗಳು ಹೆಡಿಯಾಲದ 26, ಓಂಕಾರ ವಲಯದ 33 ಕೆರೆಗಳಿವೆ. ಈ ಬಾರಿ ಮುಂಗಾರು ಉತ್ತಮವಾಗಿ ಕೆರೆಕಟ್ಟೆಗಳು ಭರ್ತಿಯಾದರೆ ನೆಮ್ಮದಿಯಾಗಲಿದೆ.

ಮಳೆಯಿಂದ ಕುಡಿಯಲು ನೀರು ಸೇರಿದಂತೆ ಹಸಿರು ಮೇವು ಸಿಕ್ಕಿದ್ದೇ ಆದರೆ ವನ್ಯ ಪ್ರಾಣಿಗಳು ಅರಣ್ಯದಿಂದ ನಾಡಿನತ್ತ ಬರುವುದು ತಪ್ಪಲಿದೆ. ಈಗ ಮಳೆ ಬಂದು ಸಮಸ್ಯೆಗಳು ನೀಗಿದ್ದರಿಂದ ಮುಂದಿನ ದಿನಗಳಲ್ಲಿ ವನ್ಯಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆ ಕಾಣಿಸದು ಜತೆಗೆ ನೀರನ್ನರಿಸಿಕೊಂಡು ವಲಸೆ ಹೋದ ವನ್ಯಪ್ರಾಣಿಗಳು, ಪಕ್ಷಿಗಳು ಹಿಂತಿರುಗಿ ಬರಲಿವೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ಬೇಸಿಗೆಯಲ್ಲಿ ಮಳೆ ಬಾರದೆ ಸಂಕಷ್ಟ ಅನುಭವಿಸಿದ್ದರೂ ಇದೀಗ ಸುರಿದ ಮಳೆಯಿಂದ ಆ ಸಂಕಷ್ಟ ದೂರವಾಗಿ ನೆಮ್ಮದಿ ಮನೆ ಮಾಡಿದೆ. ಇನ್ನೊಂದೆಡೆ ಇಡೀ ಪ್ರದೇಶ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಅದರೊಳಗೆ ಪ್ರಾಣಿಪಕ್ಷಿಗಳು ನೆಮ್ಮದಿಯಾಗಿ ವಿಹರಿಸುತ್ತಿರುವ ದೃಶ್ಯ ಮನಸೆಳೆಯುತ್ತಿದೆ.

Ad
Ad
Nk Channel Final 21 09 2023
Ad