Bengaluru 27°C
Ad

ಬಸವಗಿರಿಯಲ್ಲಿ ಮರೆಯಾದ ಬಸವತತ್ವದ ಅಕ್ಕ ಅನ್ನಪೂರ್ಣ ತಾಯಿ

ಹಚ್ಚ ಹಸಿರಿನ ನಿಸರ್ಗದ ಮಡಿಲಲ್ಲಿರುವ ನಗರದ ಪಾಪನಾಶದ ಬಸವಗಿರಿಯ ಪುರುಷ ಕಟ್ಟೆ ಸಮೀಪದ ಸಮಾಧಿಯಲ್ಲಿ ಲಿಂಗ ಮತ್ತು ವಿಭೂತಿ ನಡುವೆ ಬಸವತತ್ವದ ಪರಿಚಾರಕಿ 'ಅಕ್ಕ' ಅನ್ನಪೂರ್ಣ ತಾಯಿ (61) ಅಂತ್ಯಕ್ರಿಯೆ ಶುಕ್ರವಾರ ಸಂಜೆ ಅಪಾರ ಬಸವಭಕ್ತರ ನಡುವೆ ಜರುಗಿತು.

ಬೀದರ್: ಹಚ್ಚ ಹಸಿರಿನ ನಿಸರ್ಗದ ಮಡಿಲಲ್ಲಿರುವ ನಗರದ ಪಾಪನಾಶದ ಬಸವಗಿರಿಯ ಪುರುಷ ಕಟ್ಟೆ ಸಮೀಪದ ಸಮಾಧಿಯಲ್ಲಿ ಲಿಂಗ ಮತ್ತು ವಿಭೂತಿ ನಡುವೆ ಬಸವತತ್ವದ ಪರಿಚಾರಕಿ ‘ಅಕ್ಕ’ ಅನ್ನಪೂರ್ಣ ತಾಯಿ (61) ಅಂತ್ಯಕ್ರಿಯೆ ಶುಕ್ರವಾರ ಸಂಜೆ ಅಪಾರ ಬಸವಭಕ್ತರ ನಡುವೆ ಜರುಗಿತು.

ಅನಾರೋಗ್ಯದಿಂದ ಹೈದರಾ ಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದ ‘ಅಕ್ಕ’ನವರ ಪಾರ್ಥೀವ ಶರೀರವನ್ನು ಸಂಜೆಯೇ ಬಸವಗಿರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸುದ್ದಿ ತಿಳಿದು ನಾಡಿನ ವಿವಿಧ ಭಾಗಗಳಿಂದ ಬಸವ ಭಕ್ತರು ಗುರುವಾರ ರಾತ್ರಿಯಿಂದಲೇ ಬಸವಗಿರಿಯತ್ತ ದೌಡಾಯಿಸಿದರು. ಶುಕ್ರವಾರ ಬೆಳಕು ಹರಿಯುತ್ತಿದ್ದಂತೆ ಸಂಖ್ಯೆ ಹೆಚ್ಚಾಯಿತು. ಸಂಜೆವರೆಗೂ ಇದೇ ಪರಿಸ್ಥಿತಿ ಇತ್ತು.

ಮಧ್ಯಾಹ್ನ 3 ಗಂಟೆ ನಂತರ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭಗೊಂಡವು. ಇಡೀ ಜೀವನ ಶ್ವೇತ ವರ್ಣದ ಬಟ್ಟೆಗಳನ್ನುಟ್ಟು ಸವೆಸಿದ ಅಕ್ಕನವರಿಗೆ ಕೇಸರಿ ಬಣ್ಣದ ಸೀರೆ ತೊಡಿಸಿ, ಲಿಂಗಾಕಾರದ ಪೀಠದ ಮೇಲೆ ಕೂರಿಸಲಾಯಿತು.

ಕೊರಳಲ್ಲಿ ಲಿಂಗ ಹಾಕಿ, ಮಾಲಾರ್ಪಣೆ ಮಾಡಿ, ಕಿರೀಟ ಧಾರಣೆ ಮಾಡಲಾಯಿತು. ಅವರ ತೊಡೆಯ ಮೇಲೆ ವಚನ ಸಾಹಿತ್ಯ ಇಡಲಾಯಿತು. ವಿವಿಧ ಭಾಗದ ಪೂಜ್ಯರು ವಚನ ಪಠಣ ಕಾರ್ಯಕ್ರಮ ನಡೆಸಿಕೊಟ್ಟರು. ನೂರಾರು ಭಕ್ತರು ಇದರಲ್ಲಿ ಪಾಲ್ಗೊಂಡರು.

ಆನಂತರ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಅಕ್ಕನವರಿಗೆ ತೊಡಿಸಿದ ಕಿರೀಟ, ರುದ್ರಾಕ್ಷಿ ಮಾಲೆ ತೆಗೆದು ಕ್ರಮವಾಗಿ ಪ್ರಭು ಸ್ವಾಮೀಜಿಯವರಿಗೆ ಹಾಗೂ ಅಕ್ಕ ಗಂಗಾಂಬಿಕೆ ಅವರಿಗೆ ತೊಡಿಸಿದರು. ಆಗ ಭಕ್ತಗಣ ಭಾವುಕರಾಗಿ ಜಯಘೋಷ ಹಾಕಿದರು.

ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಅಣ್ಣಾಸಾಹೇಬ್‌ ಜೊಲ್ಲೆ, ಮಾಜಿಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಇತರೆ ಗಣ್ಯರು, ಮಠಾಧೀಶರು ಅಕ್ಕನವರು ಬಸವತತ್ವದ ಪ್ರಚಾರ, ಪ್ರಸಾರಕ್ಕಾಗಿ ಮಾಡಿದ ಕಾರ್ಯಗಳನ್ನು ಮೆಲುಕು ಹಾಕಿದರು.

ಆನಂತರ ಮಹಿಳೆಯರು ತಲೆಯ ಮೇಲೆ ವಚನ ಸಾಹಿತ್ಯವನ್ನು ಹೊತ್ತುಕೊಂಡು ಹೆಜ್ಜೆ ಹಾಕಿದರೆ, ಅದರ ಹಿಂದೆ ಅಕ್ಕನವರನ್ನು ಮೆರವಣಿಗೆಯಲ್ಲಿ ಸಮಾಧಿಯ ವರೆಗೆ ಕೊಂಡೊಯ್ಯಲಾಯಿತು.

ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಅಕ್ಕ ಗಂಗಾಂಬಿಕೆ, ಪ್ರಭು ಸ್ವಾಮೀಜಿ, ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ಮಲ್ಲಯ್ಯನಗಿರಿಯ ಬಸವಲಿಂಗ ಅವಧೂತರು, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಧನ್ನೂರ, ಭಾರತೀಯ ಬಸವ ಬಳಗದ ಬಾಬುವಾಲಿ, ಜೆಡಿಎಸ್‌ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ,ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ, ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Ad
Ad
Nk Channel Final 21 09 2023
Ad