News Karnataka Kannada
Friday, May 03 2024
ರಾಮನಗರ

ರಾಮನಗರ: ಜನರ ಮೇಲೆ ಅಘೋಷಿತ ತುರ್ತು ಪರಿಸ್ಥಿತಿ, ಆರೋಪ

Ramanagara: Undeclared emergency imposed on people, alleges allegations
Photo Credit : By Author

ರಾಮನಗರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಈಗಾಗಲೇ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜನರ ಮೇಲೆ ಹೇರಿವೆ. ಸರ್ಕಾರವನ್ನು ಪ್ರಶ್ನಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಬೆಂಬಲಿಸುವುದು ಅನಿವಾರ್ಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮುಖಂಡ ಇಂದೂಧರ ಹೊನ್ನಾಪುರ ಹೇಳಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಶ್ರೀಮಂತರ ದಬ್ಬಾಳಿಕೆಯ ವಿರುದ್ದ ಕಾನೂನು ರೂಪಿಸಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಾಲ ಕಸ ಮಾಡಿಕೊಂಡಿದ್ದು ಬಿಕ್ಷುಕ ಕೂಡ ತೆರಿಗೆ ಕಟ್ಟಬೇಕಾದ ಸ್ಥಿತಿ ಬಂದಿದೆ. ಈ ಅಘೋಷಿತ ತುರ್ತು ಪರಿಸ್ಥಿತಿ ಕಾನೂನಾತ್ಮಕ ತುರ್ತು ಪರಿಸ್ಥಿತಿಗಿಂತ ಘೋರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದಲಿತ ಸಮುದಾಯಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಪ್ರಾಥಮಿಕ ಶಿಕ್ಷಣವನ್ನು ಮಾರಾಟಕ್ಕಿಡಲಾಗಿದೆ. ದಲಿತ ಅಲ್ಪಸಂಖ್ಯಾತ ವಿರೋಧಿ ಆಡಳಿತ ನಡೆಯುತ್ತಿದೆ. ಗುಜರಾತಿನ ೪ ಜನ ಸೇರಿ ಈ ದೇಶದ ಸಂಪತ್ತನ್ನು ಲೂಟಿ ಮಾಡುತ್ತಾ ಪ್ರಪಾತಕ್ಕೆ ತಳ್ಳುತ್ತಿದ್ದಾರೆ. ದಲಿತ ಚಳುವಳಿಗಳು ಆರಂಭವಾಗಿದ್ದೇ ಕಾಂಗ್ರೆಸ್ ವಿರುದ್ದ. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದು ಆ ಪಕ್ಷಕ್ಕೆ ಬೆಂಬಲ ಕೊಡಬೇಕಾದ ಅನಿವಾರ್ಯತೆ ಬಂದಿದೆ. ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಕರ್ನಾಟಕದ ಆಸ್ಮಿತೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಬಿಜೆಪಿಯ ಆಡಳಿತದಲ್ಲಿ ಮಾನವ ಹಕ್ಕುಗಳ ಪರ ಹೋರಾಟ ಮಾಡುವವರನ್ನು ಜೈಲಿಗೆ ಅಟ್ಟಲಾಗುತ್ತಿದೆ. ಆರ್.ಎಸ್.ಎಸ್ ಹೇಳಿದಂತೆ ಬಿಜೆಪಿ ಆಡಳಿತ ನಡೆಸುತ್ತಿದ್ದು ಇದು ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಅಲ್ಲದೆ ಸಾರ್ವಜನಿಕ ಉದ್ಯಮಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸಂವಿಧಾನ ಮತ್ತು ಜನ ವಿರೋಧಿ ಆಡಳಿತವಿದ್ದು ದಲಿತ ಪರ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿದ್ದರೆ ಪರವಾಗಿರಲಿಲ್ಲ ಆದರೆ ದೇಶದಲ್ಲಿ ವೈದಿಕಶಾಹಿ ಬಂಡವಾಳ ಶಾಹಿ ಸಾಮ್ರಾಜ್ಯವನ್ನು ಸ್ಥಾಪಿಸುವ ಹುನ್ನಾರ ಮಾಡುತ್ತಿದೆ ಎಂದು ದೂರಿದರು.

ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣ, ಹೀಗಾಗಿ ಜೆಡಿಎಸ್‌ಗೆ ನೀಡುವ ಪ್ರತಿಯೊಂದು ಮತವೂ ಬಿಜೆಪಿಗೆ ನೀಡಿದಂತೆ ಎಂದರು.

ಸಮಿತಿಯ ಮುಖಂಡ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ತೀರಾ ಅಪಾಯಕಾರಿ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಹಾಗೂ ಮುಂದೆ ಬರಲಿರುವ ಲೋಕಸಭಾ ಚುನಾವಣೆಗಳು ದಲಿತ ಸಮುದಾಯಗಳು ಹಾಗೂ ರೈತ ವರ್ಗಕ್ಕೆ ನಿರ್ಣಾಯಕವಾಗಿವೆ. ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರೆದರೆ ಮುಂದೆ ಅಫ್ಘಾನಿಸ್ಥಾನದ ಮಾದರಿಯಲ್ಲಿ ಹಿಂದೂ ಮೂಲಭೂತವಾದಿಗಳಿಂದ ದಲಿತರ ಮೇಲೆ ದಬ್ಬಾಳಿಕೆಗಳು ನಡೆಯಲಿವೆ ಎಂದು ಎಚ್ಚರಿಸಿದರು. ಈ ಎರಡೂ ಚುನಾವಣೆಯಲ್ಲಿ ದಲಿತರು ಬಿಜೆಪಿ ವಿರುದ್ಧ ಮತ ಚಲಾಯಿಸಿ ಎಂದು ಕರೆ ಕೊಟ್ಟರು.

ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಎನ್.ವೆಂಕಟೇಶ್, ಎಂ.ಮುನಿಸ್ವಾಮಿ, ಜಿಗಣಿ ಶಂಕರ್, ವಿ.ನಾಗರಾಜು, ಶಿವಕುಮಾರಸ್ವಾಮಿ, ಪಿ.ಸೋಮಶೇಖರ್, ಪನೀತ್, ಗುಡ್ಡೆವೆಂಕಟೇಶ್, ಶಿವಪ್ರಕಾಶ್ ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು