ಬೆಂಗಳೂರು: ಕಳೆದ ವರ್ಷ ಏಪ್ರಿಲ್ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ವತಿಯಿಂದ ರಾಜ್ಯದಲ್ಲಿ ಆಯೋಜಿಸಲಾಗಿದ್ದ ಹುಲಿ ಯೋಜನೆ – 50 ಕಾರ್ಯಕ್ರಮಕ್ಕಾಗಿ ಕಳೆದ ವರ್ಷ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯಕ್ಕೆ ಸಂಬಂಧಪಟ್ಟಂತೆ 6.33 ಕೋಟಿ ರೂಪಾಯಿ ವೆಚ್ಚವಾಗಿತ್ತು. ಇದರಲ್ಲಿ 3 ಕೋಟಿ ರೂಪಾಯಿ ಬಂದಿದ್ದು, ಇನ್ನೂ 3 ಕೋಟಿ 33 ಲಕ್ಷ ರೂಪಾಯಿ ಬಾಕಿ ಬರಬೇಕಿದೆ.
ಇದರಲ್ಲಿ ಖಾಸಗಿ ಹೋಟೆಲ್ ಬಿಲ್ ಕೂಡಾ ಇದೆ. ಆದರೆ, ಇದರ ವೆಚ್ಚವನ್ನು ಯಾರು ಹೊರುವುದು? ಎಂಬುದೇ ಈಗ ಜಟಾಪಟಿಗೆ ಕಾರಣವಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ್ದೇ ಹೊಣೆ ಎಂದು ರಾಜ್ಯ ಅರಣ್ಯ ಇಲಾಖೆ ಹೇಳುತ್ತಿದೆ.
ಈಗ ಈ ಬಿಲ್ ಬಾಕಿ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಪ್ರಧಾನಿ ಮೋದಿ ಆತಿಥ್ಯ ವೆಚ್ಚಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, 2023ರ ಏಪ್ರಿಲ್ನಲ್ಲಿ “ಹುಲಿ ಯೋಜನೆ – 50” ಕಾರ್ಯಕ್ರಮವನ್ನು ನಡೆಸಲಾಗಿತ್ತು. ಆದರೆ, ಆ ಸಮಯದಲ್ಲಿ ವಿಧಾನಸಭಾ ಚುನಾವಣೆ ಇದ್ದಿದ್ದರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯ ಸರ್ಕಾರ ಭಾಗಿ ಆಗಿರಲಿಲ್ಲ. ರಾಜ್ಯ ಲಾಂಛನದ ಬಳಕೆಯೂ ಆಗಿರಲಿಲ್ಲ. ಇದು ಸಂಪೂರ್ಣ ಎನ್.ಟಿ.ಸಿ.ಎ. ಕಾರ್ಯಕ್ರಮವಾಗಿತ್ತು ಎಂದು ವಿವರಿಸಿದರು.
ದೇಶದ ಪ್ರಧಾನಿಯವರು ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆತಿಥ್ಯ ನಿರ್ವಹಣೆಗಾಗಿ ಸ್ಥಳೀಯವಾಗಿ ರಚಿಸಲಾಗಿದ್ದ ಸಮಿತಿಯಲ್ಲಿ ನಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು. ವಾಸ್ತವವಾಗಿ ಈ ಕಾರ್ಯಕ್ರಮಕ್ಕೆ ಆಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಎನ್.ಟಿ.ಸಿ.ಎ. ಹೇಳಿತ್ತು ಎಂದು ಈಶ್ವರ ಖಂಡ್ರೆ ವಿವರಿಸಿದರು.
ಕಾರ್ಯಕ್ರಮಕ್ಕೆ ಆಗಿರುವ ವೆಚ್ಚ 6.33 ಕೋಟಿ ರೂಪಾಯಿ ಆಗಿದೆ. ಈ ಪೈಕಿ 3 ಕೋಟಿ ರೂಪಾಯಿ ಬಂದಿದ್ದು, ಇನ್ನೂ 3 ಕೋಟಿ 33 ಲಕ್ಷ ರೂಪಾಯಿ ಬಾಕಿ ಬರಬೇಕಿದೆ. ಇದರಲ್ಲಿ ರಾಡಿಸನ್ ಬ್ಲೂ ಆತಿಥ್ಯ ವೆಚ್ಚ ಸುಮಾರು 80 ಲಕ್ಷ ರೂ. ಸೇರಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಈ ಬಗ್ಗೆ ನಮ್ಮ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಪತ್ರ ಬರೆದಿದ್ದರೂ, ಫೋನ್ ಮಾಡಿದ್ದರೂ ಎನ್.ಟಿ.ಸಿ.ಎ. ಈ ಬಾಕಿ ಹಣ ನೀಡಿಲ್ಲ. ಈಗ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುವುದಾಗಿ ಈಶ್ವರ ಖಂಡ್ರೆ ಹೇಳಿದರು.