Bengaluru 23°C
Ad

ಹೇಮಂತ್‌ ಸೊರೆನ್‌ ಜಾಮೀನಿಗಾಗಿ ಅರ್ಜಿ ಸಲ್ಲಿಕೆ: ತಿರಸ್ಕರಿಸಿದ ಸುಪ್ರೀಂ

ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ ಸೊರೆನ್‌ ಬಂಧನವನ್ನು ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಬುಧವಾರ (ಮೇ 22) ನಿರಾಕರಿಸಿದೆ.

ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ, ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ ಸೊರೆನ್‌ ಬಂಧನವನ್ನು ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಬುಧವಾರ (ಮೇ 22) ನಿರಾಕರಿಸಿದೆ.

ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಉದ್ದೇಶದಿಂದ ಹೇಮಂತ್‌ ಸೊರೆನ್‌ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಹೇಮಂತ್ ಸೊರೆನ್ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಅಂಶವನ್ನು ಮರೆಮಾಚಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಲಯ ಎಚ್ಚರಿಕೆ ನೀಡಿದ ನಂತರ ಸೊರೆನ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡರು. ಇದರಿಂದ ಸೊರೆನ್‌ ಅವರಿಗೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಹೇಮಂತ್ ಸೊರೆನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಕೋರ್ಟ್‌ ಮಂಗಳವಾರ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿತ್ತು.

ಜಾರ್ಖಂಡ್‌ನಲ್ಲಿ ಮೇ 25 ಮತ್ತು ಜೂನ್ 1ರಂದು ಚುನಾವಣೆ ನಡೆಯಲಿದ್ದು, ಪ್ರಚಾರ ನಡೆಸಲು ಜಾಮೀನು ನೀಡಬೇಕೆಂದು ಕೋರಿ ಸೊರೆನ್‌ ಮನವಿ ಸಲ್ಲಿಸಿದ್ದರು. ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಮೇ 10ರಂದು ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದಿದ್ದರು.

ಹೀಗಾಗಿ ಇದೇ ಮಾದರಿಯಲ್ಲಿ ಸೊರೆನ್‌ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಅವರಿಗಿಂತ ಹೇಮಂತ್ ಸೊರೆನ್ ಅವರ ಪ್ರಕರಣವನ್ನು ಭಿನ್ನ ಎಂದಿರುವ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

 

Ad
Ad
Nk Channel Final 21 09 2023
Ad