Bengaluru 23°C
Ad

ಆರೋಗ್ಯವಾಗಿರಬೇಕಾದರೆ ನಿದ್ದೆಯಲ್ಲಿಯೂ ಶಿಸ್ತು ಇರಬೇಕು!

ನಾವು ಆರೋಗ್ಯವಾಗಿರ ಬೇಕಾದರೆ ಶಿಸ್ತು ಬದ್ಧ ನಿದ್ದೆಯೂ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ನಿದ್ರಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯವಾಗಿರಲು ಮತ್ತು ಲವಲವಿಕೆಯಿಂದ ಕೂಡಿರಲು ಸಾಧ್ಯವಾಗುತ್ತದೆ.

ನಾವು ಆರೋಗ್ಯವಾಗಿರ ಬೇಕಾದರೆ ಶಿಸ್ತು ಬದ್ಧ ನಿದ್ದೆಯೂ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ನಿದ್ರಾ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯವಾಗಿರಲು ಮತ್ತು ಲವಲವಿಕೆಯಿಂದ ಕೂಡಿರಲು ಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ದುಡಿಮೆಯ ನಡುವೆ ನಿದ್ದೆಗೆ ಹೆಚ್ಚಿನ ಆದ್ಯತೆ ನೀಡುವುದು ಬಹು ಮುಖ್ಯವಾಗುತ್ತದೆ.

ಇವತ್ತಿಗೂ ರಾತ್ರಿ ನಿದ್ದೆಗೆಟ್ಟು ದುಡಿಯುವ ಕೆಲಸ ಕಾರ್ಯಗಳಿವೆ. ಆದರೆ ಅಂತಹವರಿಗೆ ಹಗಲಿನಲ್ಲಿ ನಿದ್ದೆ ಮಾಡುವ ಅವಕಾಶವಿರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನವರು ನಡು ರಾತ್ರಿಯಾದರೂ ನಿದ್ದೆ ಮಾಡದೆ ಮೊಬೈಲ್‌ ಅಥವಾ ಟಿವಿ ನೋಡುತ್ತಾ  ಕಾಲ ಕಳೆಯುತ್ತಿರುತ್ತಾರೆ. ಇದರಿಂದ ನಿದ್ದೆ ಮಾಡಬೇಕಾದ ಅಮೂಲ್ಯ ಸಮಯವು ವ್ಯರ್ಥವಾಗಿ ಕಳೆದು ಹೋಗುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ದೇಹಕ್ಕೆ ಹೇಗೆ ಆಹಾರ  ನೀಡುತ್ತೇವೆಯೋ ಹಾಗೆಯೇ ನಿದ್ದೆಯನ್ನು  ನೀಡಬೇಕಾಗುತ್ತದೆ. ನಿದ್ದೆಯಲ್ಲಿ ಏರುಪೇರಾದರೆ ಅದರ ಪರಿಣಾಮ ನೇರವಾಗಿ ನಮ್ಮ ಆರೋಗ್ಯದ ಮೇಲೆ ಬೀರುತ್ತದೆ. ಇಂದಿನ ದಿನಗಳಲ್ಲಿ ವಿಶ್ರಾಂತಿಯಿಲ್ಲದೆ ನಿದ್ದೆಗೆಟ್ಟು ದುಡಿಯುವುದರಿಂದಾಗಿ ನಮ್ಮ ಆರೋಗ್ಯದಲ್ಲಿ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಮಾಮೂಲಿಯಾಗಿದೆ.

ನಿದ್ದೆ ಕಡಿಮೆ ಮಾಡುವವರಲ್ಲಿ ಖಿನ್ನತೆ, ಉದ್ವೇಗ, ಅಶಾಂತಿ ತಾಂಡವವಾಡುತ್ತಿರುತ್ತದೆ. ಮತ್ತೊಂದೆಡೆ ಸ್ವಾಭಾವಿಕ ನಿದ್ದೆ ದೇಹದಿಂದ ದೂರವಾಗಿ ನಿದ್ರೆ ಮಾತ್ರೆಯ ಮೂಲಕ ನಿದ್ದೆ ಮಾಡುವಂತಹ ಪರಿಸ್ಥಿತಿಯೂ ಬಂದೊದಗುತ್ತದೆ. ನಿದ್ದೆಯಿಂದ ದೇಹಕ್ಕೆ  ವಿಶ್ರಾಂತಿ ದೊರೆಯುತ್ತದೆ. ಆಳವಾದ ನಿದ್ದೆಯಿಂದ ಒಬ್ಬ ವ್ಯಕ್ತಿಯು ಉದ್ವೇಗದಿಂದ ಮುಕ್ತಿ ಪಡೆಯುತ್ತಾನೆ. ಏಕೆಂದರೆ ಮೆದುಳು ಮತ್ತು ಶರೀರಗಳಿಗೆ ಸಂಪೂರ್ಣವಾದ ವಿಶ್ರಾಂತಿ ನಿದ್ದೆಯಿಂದ ದೊರೆಯುತ್ತದೆ.

ರಾತ್ರಿಯೆಲ್ಲಾ ನಿದ್ದೆ ಮಾಡಿದ್ದೇ ಆದರೆ, ಮುಂಜಾನೆ ಶರೀರ ಹಗುರವಾಗಿ ಉಲ್ಲಾಸ ಮೂಡುತ್ತದೆ. ನಿದ್ದೆಯ ಅಭಾವವಾದರೆ  ಮನುಷ್ಯರಲ್ಲಿ ಸಿಡುಕು ಸ್ವಭಾವ ಮೂಡಬಹುದು. ಶರೀರದಲ್ಲಿ ಸ್ನಾಯುಗಳು ದುರ್ಬಲವಾಗಿ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ನಿದ್ದೆ ಬಾರದಿರುವುದು,  ರಾತ್ರಿಯೆಲ್ಲಾ ಎಚ್ಚರವಾಗಿರುವುದು ಅಥವಾ ರಾತ್ರಿಯೆಲ್ಲಾ ನಿದ್ದೆಬಾರದೆ ಬೆಳಗಿನ ಜಾವ ತಡವಾಗಿ ನಿದ್ದೆ ಬರುವುದು ಇದು ಇನ್‌ ಸೋಮ್ನಿಯಾ(ಅನಿದ್ದೆ) ರೋಗದ ಲಕ್ಷಣಗಳಾಗಿವೆ.

ಈ ರೋಗ ಹಲವು ಕಾರಣಗಳಿದ್ದಾಗ ಬರುತ್ತದೆ. ಶರೀರದಲ್ಲಿ ಅತಿಯಾದ ವೇದನೆ, ಹಳೆಯ ಕೆಮ್ಮು, ಮಾನಸಿಕ ವಿಕೃತಿ,  ಡಿಪ್ರೆಷನ್ ಮುಂತಾದವು ಅನಿದ್ದೆಗೆ ಕಾರಣವಾಗುತ್ತದೆ.  ಅನಿದ್ದೆಯನ್ನು ನಿವಾರಿಸಲು ಉತ್ತಮ ನಿದ್ದೆಯನ್ನು ಪಡೆಯಲು ಯೋಗದಲ್ಲಿ ಕೆಲವು ಕ್ರಮಗಳನ್ನು ವಿವರಿಸಲಾಗಿದೆ. ನಿದ್ದೆ ಬಾರದಿದ್ದಾಗ ಔಷಧಿಗೆ ಶರಣಾಗದೆ ಯೋಗ ವಿಜ್ಞಾನದಲ್ಲಿ ಹೇಳಲಾಗಿರುವ  ಕೆಲವು ವಿಶೇಷ ರೀತಿಯ ಆಸನಗಳನ್ನು ಮಾಡುವುದರ ಮೂಲಕ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಶವಾಸನವನ್ನು ಮಾಡುವ ಮೂಲಕ ಅನಿದ್ದೆಯನ್ನು ದೂರಮಾಡಬಹುದಾಗಿದ್ದು, ಶವಾಸನ ಮಾಡುವಾಗ ಬೆನ್ನನ್ನು  ನೆಲಕ್ಕೆ ಮಾಡಿ ನೀಳವಾಗಿ ಮಲಗಬೇಕು. ಅಂಗೈಗಳನ್ನು ಮೇಲಕ್ಕೆ ಕಾಣುವಂತೆ ಹಿಡಿದಿರಬೇಕು. ಎರಡು ಕಾಲುಗಳ ಮಧ್ಯೆ ಸುಮಾರು ಎರಡು ಅಡಿಗಳ ಅಂತರವಿರಬೇಕು.  ಕಣ್ಣುಗಳನ್ನು ಮುಚ್ಚಿಕೊಂಡು ಶರೀರವನ್ನು ಸಂಪೂರ್ಣವಾಗಿ ಸಡಿಲಗೊಳಿಸಬೇಕು. ಶವಾಸನ ಮಾಡುವಾಗ ಶರೀರದ ಯಾವ ಭಾಗದಲ್ಲಿಯೂ ಕೂಡ ಬಿಗಿತವನ್ನು ಸಾಧಿಸಬಾರದು. ಆ ನಂತರ ಧ್ಯಾನವನ್ನು ಉಸಿರಾಟದತ್ತ ಹರಿಸಬೇಕು.

ಶ್ವಾಸ-ಉಚ್ಛಾಸವನ್ನು ಒಂದೇ ಎಂದು ಪರಿಗಣಿಸಿ ಒಂದು… ಎರಡು… ಹೀಗೆ ಎಣಿಸುತ್ತಾ ಹೋಗಬೇಕು. ಎಷ್ಟು ಸಾಧ್ಯವೋ ಅಷ್ಟು  ಎಣಿಸುತ್ತಿರಬೇಕು. ಎಣಿಸುವ ಸಂಖ್ಯೆಯನ್ನು ಮರೆಯಬಾರದು. ಒಂದು ವೇಳೆ ಎಣಿಸುವ ಸಂಖ್ಯೆಯನ್ನು ಮರೆತರೂ ಶರೀರವನ್ನು ಕದಲಿಸಬಾರದು. ಹೀಗೆ ಮಾಡುವುದರಿಂದ ಮನಸ್ಸು ಹಾಗೂ ಶರೀರ ಹಗುರವಾಗುತ್ತದೆ. ಅನಿದ್ದೆಯಿಂದ ಬಳಲುವವರಿಗೆ ಶವಾಸನವು ತುಂಬಾ ಉಪಯುಕ್ತವಾಗಿದ್ದು ಭಯ ಚಿಂತೆ, ಶೋಕ, ಕಾಮ ಮುಂತಾದವುಗಳಿಂದ ಬಳಲುವವರು ಶವಾಸನ ಮಾಡುವುದರಿಂದ ಖಂಡಿತವಾಗಿಯೂ  ಪರಿಹಾರ ದೊರೆಯುತ್ತದೆ ಎಂಬುದು ಶವಾಸನ ಮಾಡಿ ಪರಿಹಾರ ಕಂಡುಕೊಂಡವರ ಅಭಿಪ್ರಾಯವಾಗಿದೆ.

ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗುವುದರಿಂದ, ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು  ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ. ಇನ್ನು ಮಲಗುವ ಹಾಸಿಗೆಯು ಅತಿಗಟ್ಟಿಯಾಗಿಯೂ, ಮೆತ್ತಗಾಗಿಯೂ ಇರಬಾರದು. ಮಲಗುವ ಕೋಣೆ ಶಾಂತವಾಗಿದ್ದು, ಗಾಳಿ ಬೆಳಕಾಡುವಂತಿರಬೇಕು. ಮಲಗುವ ಮುನ್ನ ಸ್ನಾನ ಅಥವಾ ಕೈಕಾಲು ತೊಳೆದು ಮಲಗಬೇಕು.

ತಜ್ಞರ ಅಭಿಪ್ರಾಯದಂತೆ ಆರೋಗ್ಯವಂತ ಮನುಷ್ಯನಿಗೆ  6ರಿಂದ 8ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ  ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ.  ಅದರಂತೆ ಒಂದು ತಿಂಗಳ ಮಗುವಿಗೆ  21ಗಂಟೆ, ಆರು ತಿಂಗಳ ಮಗುವಿಗೆ 18ಗಂಟೆ, ಒಂದು ವರ್ಷದ ಮಗುವಿಗೆ 12ಗಂಟೆ, ನಾಲ್ಕು ವರ್ಷದ ಮಗುವಿಗೆ 11ಗಂಟೆ, 12 ವರ್ಷ ಮೇಲ್ಪಟ್ಟವರಿಗೆ 10ಗಂಟೆ, 16ವರ್ಷದವರಿಗೆ 8ಗಂಟೆ, 30ವರ್ಷ ಮೇಲ್ಪಟ್ಟವರಿಗೆ 6ರಿಂದ 8ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ.

ಸಾಮಾನ್ಯವಾಗಿ ಶಾರೀರಿಕ ಹಾಗೂ ಮಾನಸಿಕವಾಗಿ ದಣಿಯುವವರಿಗೆ ನಿದ್ದೆಯು ಚೆನ್ನಾಗಿ ಬರುತ್ತದೆ. ನಿದ್ದೆಯಿಂದ ಆರೋಗ್ಯ ದೊರೆಯುತ್ತದೆ. ಹಾಗೆಂದು ಸದಾ ನಿದ್ದೆಯಲ್ಲೇ ತೊಡಗುವುದು ಆಲಸ್ಯ, ಸೋಮಾರಿತನವನ್ನು ಹುಟ್ಟು ಹಾಕುತ್ತದೆ. ಇದು  ಆರೋಗ್ಯಕ್ಕೆ ಅಹಿತಕರವಾಗಿ ಪರಿಣಮಿಸುತ್ತದೆ. ಆದುದರಿಂದ ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿ ನಿರ್ದಿಷ್ಟ ಸಮಯವನ್ನು ನಿದ್ದೆಗೆ ತೆಗೆದಿಡಬೇಕು. ಸಮಯ ಸಿಕ್ಕಾಗಲೆಲ್ಲಾ ನಿದ್ದೆಗೆ ಜಾರುವುದು ಆರೋಗ್ಯಕರ ಲಕ್ಷಣವಲ್ಲ ಎಂಬುದನ್ನು ಮರೆಯಬಾರದು.

ನಿದ್ದೆ ಮಾಡುವುದರಲ್ಲಿಯೂ ಶಿಸ್ತು ಅಳವಡಿಸಿಕೊಂಡರೆ ಒಳ್ಳೆಯದು. ಇದರಿಂದ ಆರೋಗ್ಯಕರ ಜೀವನ ಮಾಡಲು ಸಹಕಾರಿಯಾಗುತ್ತದೆ. ನಿದ್ದೆಗೆ ಜಾರುವ ಮುನ್ನ ಬೆಳಗ್ಗೆ ಎದ್ದಲ್ಲಿಂದ ಮಲಗುವ ತನಕ ಏನೇನು ಮಾಡಿದ್ದೇವೆ ಎಂಬುದನ್ನು ಮೆಲುಕು ಹಾಕುವ ಅರ್ಥಾತ್ ಸಿಂಹಾವಲೋಕನ ಮಾಡುವುದು ಒಳ್ಳೆಯ ಹವ್ಯಾಸ. ಈ ವೇಳೆ ನಾವು ಮಾಡಿದ ಒಳ್ಳೆ ಕೆಲಸಗಳು ಮನಸ್ಸಿಗೆ ನೆಮ್ಮದಿಕೊಡುವುದರೊಂದಿಗೆ ನಿದ್ದೆ ಆವರಿಸಲು ಸಹಕಾರಿಯಾಗುತ್ತದೆ.

Ad
Ad
Nk Channel Final 21 09 2023
Ad