News Karnataka Kannada
Friday, May 03 2024
ಲೇಖನ

ವಿಶ್ವ ರಕ್ತದಾನಿಗಳ ದಿನ: ರಕ್ತದಾನಿಗಳಿಗೆ ನಮ್ಮದೊಂದು ಸೆಲ್ಯೂಟ್

World Blood Donor Day: Our salute to blood donors
Photo Credit : By Author

ಪ್ರತಿದಿನವೂ ಒಂದಲ್ಲ ಒಂದು ಕಡೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈ ವೇಳೆ ಗಾಯಾಳುಗಳು ರಕ್ತದ ಕೊರತೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ರಕ್ತ ಸಿಗದೆ ಹೋದರೆ ಜೀವಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಇಂತಹದೊಂದು ಸಂದರ್ಭವನ್ನು ಎದುರಿಸಿದವರಿಗೆ ರಕ್ತದಾನಿಗಳ ಬಗ್ಗೆ ಅಭಿಮಾನ ಮೂಡುತ್ತದೆ. ಅಷ್ಟೇ ಅಲ್ಲದೆ ಅವರ ಮೇಲೆ ಗೌರವ ಮೂಡುತ್ತದೆ.

ಇವತ್ತು (ಜೂ.14) ನಾವು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತಿದ್ದೇವೆ. ಈ ವೇಳೆ ಯಾವುದೇ ಸ್ವಾರ್ಥವಿಲ್ಲದೆ, ತಮ್ಮ ರಕ್ತವನ್ನು ದಾನ ಮಾಡಲು ಬರುವ ದಾನಿಗಳಿಗೊಂದು ಸಲಾಮ್ ಹೇಳಬೇಕಾಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಬೇರೆಲ್ಲ ದಾನಗಳಿಗಿಂತ ರಕ್ತದಾನವನ್ನು ಮಹಾದಾನ ಎನ್ನಲೇ ಬೇಕಾಗುತ್ತದೆ. ಏಕೆಂದರೆ ಅದೊಂದು ರೀತಿಯ ಪುಣ್ಯದ ಕಾರ್ಯವೂ ಹೌದು.

ಈಗಾಗಲೇ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿರುವುದಲ್ಲದೆ, ರಕ್ತದಾನದ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜಸೇವೆ ಮಾಡುವವರೂ ಇದ್ದಾರೆ. ಇವರ ನಡುವೆಯೂ ರಕ್ತದಾನ ಮಾಡುವ ಬಗ್ಗೆ ಕೆಲವು ತಪ್ಪು ಕಲ್ಪನೆಗಳು ಇಲ್ಲದಿಲ್ಲ. ಜತೆಗೆ ಅದರ ಸುತ್ತಲೂ ಅಂತೆ ಕಂತೆಗಳ ಸುದ್ದಿಯೂ ಇದೆ.

ಹಾಗಾದರೆ ನಮ್ಮಲ್ಲಿ ಬೇರೂರಿದ ಆ ತಪ್ಪು ಕಲ್ಪನೆಗಳೇನು? ಅದಕ್ಕೆ ವೈದ್ಯಕೀಯ ವಲಯ ಏನು ಹೇಳುತ್ತದೆ ಎಂಬಿತ್ಯಾದಿ ವಿಷಯವನ್ನು ನೋಡಿದರೆ ಮೊದಲಿಗೆ ಹೇಳಬೇಕೆಂದರ 18 ರಿಂದ 60 ವರ್ಷದೊಳಗಿನ 45 ಕೆ.ಜಿ.ಗಿಂತಲೂ ಹೆಚ್ಚು ತೂಕವಿರುವ, 12.5ಗ್ರಾಂ.ಗಿಂತಲೂ ಹೆಚ್ಚು ಹಿಮೋಗ್ಲೋಬಿನ್ ಅಂಶ ಹೊಂದಿರುವ ಎಲ್ಲ ಆರೋಗ್ಯವಂತರೂ ರಕ್ತದಾನ ಮಾಡಬಹುದಾಗಿದೆ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್ನಷ್ಟು ರಕ್ತ ಇರುತ್ತದೆ. ರಕ್ತ ಕೊಡುವ ವ್ಯಕ್ತಿ(ದಾನಿ)ಯಿಂದ ಕೇವಲ 350 ಮಿಲಿಯಷ್ಟೇ ರಕ್ತವನ್ನು ತೆಗೆದುಕೊಳ್ಳುವುದರಿಂದ ಯಾವುದೇ ಅಪಾಯವಾಗುವುದಿಲ್ಲ.

ಎಲ್ಲ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ನಿರಾತಂಕವಾಗಿ ರಕ್ತದಾನ ಮಾಡಬಹುದು. ಸಾಮಾನ್ಯವಾಗಿ ದಾನಿಯಿಂದ ಪಡೆದ ರಕ್ತವನ್ನು 35 ದಿನಗಳವರೆಗೆ ಅದು ಯಾವುದೇ ರೀತಿಯಲ್ಲಿಯೂ ಹಾಳಾಗದಂತೆ ವಿಶೇಷ ರೆಫ್ರಿಜಿರೇಟರ್ಗಳಲ್ಲಿ ಶೇಖರಿಸಿಟ್ಟು ಉಪಯೋಗಿಸಲಾಗುತ್ತದೆ.

ಯಾರೆಲ್ಲ ರಕ್ತದಾನ ಮಾಡಬಾರದು ಎಂಬುದನ್ನು ನೋಡಿದ್ದೇ ಆದರೆ 18 ವರ್ಷಕ್ಕಿಂತ ಕಡಿಮೆ ಇರುವ ಲಿವರ್, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವ ಮಹಿಳೆಯರು, ಮಗುವಿಗೆ ಹಾಲುಣಿಸುವ ತಾಯಂದಿರು, ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾದವರು, ಒಂದು ವರ್ಷದವರೆಗೆ ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಆರು ತಿಂಗಳವರೆಗೆ ಯಾವುದಾದರು ಕಾಯಿಲೆಯ ವಿರುದ್ಧ ಲಸಿಕೆಗಳನ್ನು ತೆಗೆದುಕೊಂಡವರು ಮುಂದಿನ ಆರು ತಿಂಗಳವರೆಗೆ ರಕ್ತದಾನ ಮಾಡಲು ಅವಕಾಶ ಇರುವುದಿಲ್ಲ.

ಇನ್ನೂ ರಕ್ತ ವರ್ಗಾವಣೆಯಿಂದ ಯಾವುದಾದರೂ ರೋಗ ಅಥವಾ ಸೋಂಕು ತಗಲುತ್ತದೆ ಎಂಬ ಭಯವೂ ಕೆಲವರಲ್ಲಿದೆ. ರಕ್ತದಾನ ಮಾಡುವ ದಾನಿಯಿಂದ ಸ್ವೀಕರಿಸಿದ ರಕ್ತವನ್ನು ರಕ್ತನಿಧಿಗಳಲ್ಲಿ ಹೆಪಟೈಟಿಸ್ ಬಿ. ಹೆಪಟೈಟಿಸ್ ಸಿ. ಎಚ್ಐವಿ, ಮಲೇರಿಯಾ, ಸಿಫಿಲಿಸ್ ಮುಂತಾದ ಸೂಕ್ಷಾಣುಗಳಿಗಾಗಿ ಪರೀಕ್ಷಿಸಿ. ರೋಗಾಣುಗಳಿಂದ ಮುಕ್ತವಾದ ರಕ್ತವನ್ನು ಮಾತ್ರವೇ ಅವಶ್ಯಕತೆ ಇರುವರಿಗೆ ವರ್ಗಾಯಿಸುತ್ತಾರೆ. ಅಲ್ಲದೆ ದಾನಿಯಿಂದ ರಕ್ತವನ್ನು ಸ್ವೀಕರಿಸುವಾಗಲೂ ಸಂಸ್ಕರಿಸಿದ ಶುದ್ಧವಾದ ಉಪಕರಣಗಳನ್ನು ಬಳಸುತ್ತಾರೆ ಹಾಗಾಗಿ ರಕ್ತದಾನ ಪ್ರಕ್ರಿಯೆಯಲ್ಲಿ ದಾನಿಗಾಗಲೀ, ರಕ್ತ ವಗಾವಣೆ ಮಾಡಿಸಿಕೊಂಡವರಿಗಾಗಲಿ ಸೋಂಕಿನ ಭಯ ಬೇಡ. ಯಾವುದೇ ಭಯ ಆತಂಕಗಳಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಸ್ವಇಚ್ಛೆಯಿಂದ ರಕ್ತದಾನವನ್ನು ಮಾಡಬಹುದಾಗಿದೆ.

ರಕ್ತದಾನದ ಬಗ್ಗೆ ಅರಿತು ಮತ್ತು ಇಲ್ಲಸಲ್ಲದ ಕೆಲವು ಆಧಾರ ರಹಿತ ಮಾತುಗಳಿಗೆ ಸೊಪ್ಪು ಹಾಕದೆ ಆರೋಗ್ಯವಂತರು ರಕ್ತದಾನ ಮಾಡಿದ್ದೇ ಆದರೆ ರಕ್ತದ ಬೇಡಿಕೆಯನ್ನು ನೀಗಿಸುವುದರೊಂದಿಗೆ, ಒಂದು ಜೀವವನ್ನು ಉಳಿಸಿದ ಪುಣ್ಯವನ್ನು ಕಟ್ಟಿಕೊಳ್ಳಬಹುದಾಗಿದೆ. ರಕ್ತದಾನ ಮಾಡಿದ ವ್ಯಕ್ತಿಗೆ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕಾಗುತ್ತದೆ. ಜೊತೆಗೆ ಯಾವುದೇ ರೀತಿ ಔಷಧದ ಅಗತ್ಯವಿರುವುದಿಲ್ಲ, ವ್ಯಕ್ತಿಯು ರಕ್ತದಾನ ಮಾಡಿದ ಆ ದಿನ ನೀರನ್ನು ಹೆಚ್ಚಾಗಿ ಕುಡಿಯಬೇಕು. ರಕ್ತದಾನದ ಕೆಲವು ತಾಸುಗಳೊಳಗಾಗಿ ದಾನಿಯ ದೇಹದಲ್ಲಿ ಹೊಸ ರಕ್ತಕಣಗಳನ್ನು ಉತ್ವಾದಿಸಲು ಪ್ರಾರಂಭಿಸುತ್ತದೆ. ಮುಂದಿನ ಮೂರು ತಿಂಗಳೊಳಗಾಗಿ ದಾನಿಯ ದೇಹದಲ್ಲಿ ಮರು ರಕ್ತ ತಯಾರಾಗುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು