News Karnataka Kannada
Tuesday, April 30 2024
ಕ್ಯಾಂಪಸ್

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ

F.mullar
Photo Credit :

ಮಂಗಳೂರು: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 32ನೇ ಪದವಿ ಪ್ರದಾನ ಸಮಾರಂಭವನ್ನು ಮೇ.14ರಂದು ಪೂರ್ವಾಹ್ನ 10 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಸಲಾಯಿತು.

ಸಮಾರಂಭದಲ್ಲಿ 99 ಪದವಿ ವಿದ್ಯಾರ್ಥಿಗಳು ಹಾಗೂ 26 ಸ್ನಾತಕೋತ್ತರ ಪದವೀದರರಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ಆಳ್ವಾಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಹಾಗೂ ಚೇರ್‌ಮೆನ್ ಡಾ. ಎಮ್. ಮೋಹನ್ ಆಳ್ವ ರವರು ಮುಖ್ಯ ಅತಿಥಿಯಾಗಿ, ಮೆಡಿಕಲ್ ಅಸೆಸ್‌ಮೆಂಟ್ ಮತ್ತು ರೇಟಿಂಗ್ ಬೋರ್ಡ್ ಫಾರ್ ಹೋಮಿಯೋಪಥಿಯ ಅಧ್ಯಕ್ಷ ಡಾ. ಕೆ. ಆರ್. ಜನಾರ್ದನನ್ ನಾಯರ್ ರವರು ಗೌರವಾನ್ವಿತ ಅತಿಥಿಗಳಾಗಿ ಪ್ರಮಾಣ ಪತ್ರ ವಿತರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಸಭೆಯನ್ನು ಸ್ವಾಗತಿಸಿ ಕಳೆದ 141 ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿನ ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಪಾತ್ರ ಹಾಗೂ 1985 ರಿಂದ ನಿರಂತರವಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ನೀಡುವ ಸೇವೆಯ ಬಗ್ಗೆ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ರವರು ವಾರ್ಷಿಕ ವರದಿಯಲ್ಲಿ 2021-22ರಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು ಮತ್ತು ಪದವಿ ಸ್ವೀಕರಿಸಿದ ಹೋಮಿಯೋಪಥಿ ವೈದ್ಯರ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾದ ಡಾ. ಎಮ್. ಮೋಹನ್ ಆಳ್ವರವರು ಪದವಿ ಪ್ರಧಾನ ಸಮಾರಂಭದ ಸಂದೇಶದೊಂದಿಗೆ ಪ್ರತಿಷ್ಠಿತ ಫಾದರ್ ಮುಲ್ಲರ್ ವಿದ್ಯಾಸಂಸ್ಥೆಯಿಂದ ಪದವಿಯನ್ನು ಸಂಪೂರ್ಣಗೊಳಿಸಿದ ಪದವೀಧರರನ್ನು ಅಭಿನಂದಿಸಿದರು ಹಾಗೂ ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಮಾನವೀಯತೆ, ಕರುಣೆ, ಪ್ರೀತಿ, ಸೇವಾ ಮನೋಭಾವವನ್ನು ಬೆಳೆಸಿಕೊಂಡು, ಇಂದು ತೆಗೆದುಕೊಂಡ ಪ್ರತಿಜ್ಞೆಯನ್ನು ಸದಾ ನೆನಪಿಸಿಕೊಂಡು ತಮ್ಮ ವೈದ್ಯ ವೃತ್ತಿಯನ್ನು ಮುಂದುವರೆಸುವಂತೆ ಪದವೀಧರರನ್ನು ಒತ್ತಾಯಿಸಿದರು.

ಪದವೀದರರ ಪರವಾಗಿ ಡಾ. ರಿಯಾ ಗ್ರೇಸ್ ದೇವಾಸಿಯ ರವರು ತನ್ನ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ಗೌರವಾನ್ವಿತ ಅತಿಥಿಗಳಾದ ಡಾ. ಕೆ. ಆರ್. ಜನಾರ್ದನನ್ ನಾಯರ್‌ರವರು ತಮ್ಮ ಸಂದೇಶದಲ್ಲಿ ಹೋಮಿಯೋಪಥಿಯ ಪರಿಕಲ್ಪನೆಯಾದ ವೈಯಕ್ತೀಕರಣದ ಕೌಶಲ್ಯವನ್ನು ಅರ್ಥಮಾಡಿಕೊಂಡು ಕಲಿಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿ, ಪ್ರಸ್ತುತ ಸಮಯದ ಅವಶ್ಯಕತೆಯಾದ ಸಂಶೋಧನೆಯತ್ತ ಉದಯೋನ್ಮುಖ ಹೋಮಿಯೋಪಥಿ ವೈದ್ಯರುಗಳು ಗಮನ ಹರಿಸುವಂತೆ ಹುರಿದುಂಬಿಸಿದರು ಮತ್ತು ಹೋಮಿಯೋಪಥಿ ರಾಷ್ಟ್ರೀಯ ಆಯೋಗದ ಕಾರ್ಯನಿರ್ವಹಣೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯಪಡಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾಲೇಜಿಗೆ ರ‍್ಯಾಂಕ್ ತಂದ 8 ಪದವೀಧರ ಮತ್ತು 9 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಬಿಷಪ್‌ರವರು ಸನ್ಮಾನಿಸಿದರು. ಈ ವರ್ಷ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು ಅವಧಿವಾರು 31 ರ‍್ಯಾಂಕ್ ಹಾಗೂ ವಿಷಯವಾರು 127 ರ‍್ಯಾಂಕ್ ಗಳಿಸುವುದರೊಂದಿಗೆ ಒಟ್ಟು 166 ರ‍್ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿದೆ.

2015-16 ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರೆ ಡಾ. ಡಾನಿಯಾ ರವರು ಗಳಿಸಿದ್ದು ಹಾಗೂ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯ ಅತ್ಯುತ್ತಮ ಪ್ರಬಂದ ಮಂಡಣೆಗಾಗಿ ನೀಡಿರುವ ವಿದ್ಯಾರ್ಥಿವೇತನವನ್ನು 2018-19 ರ ಹೋಮಿಯೋಪಥಿ ಫಾರ್ಮಸಿ ವಿಭಾಗದ ಡಾ. ಗಾಯತ್ರಿ ಕ್ರೋವಿಡಿಯವರು ಪಡೆದಿದ್ದು, ಅವರನ್ನೂ ಈ ಸಂದರ್ಭದಲ್ಲಿ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.

6ನೇ ಮುಲ್ಲೇರಿಯನ್ ಬ್ಯಾಚ್ ಪ್ರಾಯೋಜಿಸಿದ ‘ಡಾ. ಸುಮೊದ್ ಜಾಕೊಬ್ ಸೊಲೊಮನ್ ಪ್ರಶಸ್ತಿ’ಯನ್ನು 2018-19 ಬ್ಯಾಚ್ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ಆನ್ಸಿ ಜಾರ್ಜ್ ರವರಿಗೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಪ್ರತಿಷ್ಠಿತ ಅಧ್ಯಕ್ಷೀಯ ಚಿನ್ನದ ಪದಕವನ್ನು ಅತ್ಯುತ್ತಮ ಸಾಧನೆ ಮಾಡಿದ ಹೋಮಿಯೋಪಥಿ ಪದವಿ ವಿದ್ಯಾರ್ಥಿನಿ ಡಾ. ಸಿಮ್ನಾ ತಸ್ನೀಮ್ ಟಿ. ಎ. ರವರಿಗೆ ನೀಡಿ ಗೌರವಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವೀಧರರನ್ನು ಅಭಿನಂದಿಸಿದರು ಮತ್ತು ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಹನ್ ಡಾಯಸ್, ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ, ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ರಂಜನ್ ಕ್ಲೆಮೆಂಟ್ ಬ್ರಿಟ್ಟೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತಾರವರು ವಂದನಾರ್ಪಣೆಗೈದರು. ಡಾ. ರೇಶಲ್ ನೊರೊನ್ಹ ಹಾಗೂ ಡಾ. ಸ್ಕಂದನ್ ಎಸ್. ಕುಮಾರ್‌ರವರು ಪದವಿ ಪ್ರದಾನ ಕಾರ್ಯಕ್ರಮವನ್ನು ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು