ರೋಮ್: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಪತಿ ಆಂಡ್ರಿಯಾ ಗಿಯಾಂಬ್ರುನೋ ಮಹಿಳೆಯರ ಕುರಿತು ಮಾಡಿದ ಕಮೆಂಟ್ ಒಂದು ಈಗ ವಿವಾದಕ್ಕೆ ಈಡಾಗಿದೆ.
ಚಾನೆಲ್ ರೀಟೆ 4 ನಲ್ಲಿ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಆಂಡ್ರಿಯಾ ಗಿಯಾಂಬ್ರುನೋ ಯುವತಿಯರ ಮೇಲಿನ ಸಾಮೂಹಿಕ ಅತ್ಯಾಚಾರದ ಕುರಿತು ಪ್ರತಿಕ್ರಿಯಿಸುವಾಗ, ಮಹಿಳೆಯರು “ಹೆಚ್ಚು ಕುಡಿಯದಿದ್ದಲ್ಲಿ ಲೈಂಗಿಕ ದೌರ್ಜನ್ಯಗಳನ್ನು ತಪ್ಪಿಸಬಹುದು ಎಂದು ಹೇಳಿರುವುದು ವಿವಾದ, ಆಕ್ರೋಶಕ್ಕೆ ಕಾರಣವಾಗಿದೆ.
ನೀವು ಡ್ಯಾನ್ಸ್ ಮಾಡಲು ಹೋಗುವುದಾದರೆ ಅಲ್ಲಿ ಕುಡಿಯಲೇ ಬೇಕಾಗುತ್ತದೆ. ಆದರೆ ಆ ವೇಳೆ ಸ್ವಲ್ಪ ಬುದ್ದಿವಂತಿಕೆ ತೋರಿ ಹೆಚ್ಚು ಕುಡಿಯುವುದನ್ನು ತಪ್ಪಿಸಿದಲ್ಲಿ ತೊಂದರೆಗೆ ಸಿಲುಕುವುದರಿಂದ ಪಾರಾಗಬಹುದು ಎಂದು ಆಂಡ್ರಿಯಾ ಗಿಯಾಂಬ್ರುನೋ ಹೇಳಿದ್ದರು. ಈ ಬಗ್ಗೆ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹುಡುಗಿಯರಿಗೆ ಜಾಗರೂಕರಾಗಿರಲು ಕಲಿಸುವ ಬದಲು ಹುಡುಗರು ಮಹಿಳೆಯರಿಗೆ ಗೌರವವನ್ನು ನೀಡುವುದು ಹೇಗೆ ಎಂಬ ಬಗ್ಗೆ ಶಿಕ್ಷಣ ನೀಡಬೇಕು ಎಂದು ನಾನು ಗಿಯಾಂಬ್ರುನೊಗೆ ಹೇಳುತ್ತೇನೆ ಎಂದು ವಿರೋಧ ಪಕ್ಷ ಪಾರ್ಟಿಟೊ ಡೆಮಾಕ್ರಟಿಕೊ ಸೆನೆಟರ್ ಸಿಸಿಲಿಯಾ ಡಿ’ಎಲಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.