ನವದೆಹಲಿ: ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಶೇ 5 ಮೀಸಲಾತಿ ನೀಡುವಂತೆ ನೋಡಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಅಂಗವಿಕಲರ ಹಕ್ಕುಗಳ ಕಾಯ್ದೆ- 2016 ಅಡಿ ಇದು ಅಧಿಕೃತ ಆದೇಶವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಜೊತೆಗೆ, ಕಾನೂನು ಪ್ರಕಾರ ಅಂಗವಿಕಲ ಅಭ್ಯರ್ಥಿಗಳಿಗೆ ಸೀಟು ಮೀಸಲಿಡಲು ಗುರುಗೋವಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯಕ್ಕೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಅವರ ನೇತೃತ್ವದ ನ್ಯಾಯಪೀಠವು ಸೂಚಿಸಿದೆ.
ಅಂಗವಿಕಲರಿಗೆ ಈ ವಿಶ್ವವಿದ್ಯಾಲಯವು ಕಾನೂನಿನ ಪ್ರಕಾರ ಶೇ 5 ಮೀಸಲಾತಿ ನೀಡದೇ, ಶೇ 3 ಮೀಸಲಾತಿ ನೀಡುತ್ತಿದೆ ಎಂದು ಆರೋಪಿಸಿ ‘ಜಸ್ಟೀಸ್ ಫಾರ್ ಆಲ್’ ಎಂಬ ಸರ್ಕಾರೇತರ ಸಂಸ್ಥೆಯು (ಎನ್ಜಿಒ) ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಎಲ್ಲಾ ಕೋರ್ಸ್ಗಳಲ್ಲೂ ಅಂಗವಿಕಲ ಅಭ್ಯರ್ಥಿಗಳಿಗೆ ವಿ.ವಿಯು ಶೇ.5 ಮೀಸಲಾತಿ ನೀಡುತ್ತಿತ್ತು. ಈ ವಿಚಾರದಲ್ಲಿ ಪುನಃ ಆದೇಶ ಹೊರಡಿಸುವ ಅಗತ್ಯವಿಲ್ಲ. ಎಲ್ಲಾ ವರ್ಗಗಳ ಅಂಗವಿಕಲ ಅಭ್ಯರ್ಥಿಗಳಿಗೆ ಸೀಟು ನೀಡಿ ಮೀಸಲಿಟ್ಟಿರುವ ಸೀಟುಗಳು ಭರ್ತಿಯಾಗುವಂತೆ ದೆಹಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆದೇಶಿಸಿದೆ.