ಕೊರೋನಾ 2ನೇ ಅಲೆ ಇಳಿಮುಖವಾಗಿ ಜನ ಜೀವನ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಇದರ ಬೆನ್ನಲ್ಲೇ ಕೆಲ ರಾಜ್ಯಗಳಲ್ಲಿ ಸೋಂಕಿತ ಪ್ರಕರಣ ಹೆಚ್ಚುತ್ತಿದೆ. ಇದು 3ನೇ ಅಲೆಯ ಆತಂಕ ಮೂಡಿಸಿದೆ.
ಕಳೆದ ಎರಡು ದಿನಗಳಲ್ಲಿ ಕರ್ನಾಟಕದ ಧಾರವಾಡದ ಎಸ್ಡಿಎಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ 281 ಕೊರೋನಾ ಸೋಂಕು ದೃಢಪಟ್ಟಿವೆ. ಇದರ ಬೆನ್ನಲ್ಲೇ ಇದೀಗ ಒಡಿಶಾದ ಮಯೂರ್ಭಂಜ್ ವಸತಿ ಶಾಲೆಯ 26 ವಿದ್ಯಾರ್ಥಿನಿಯರಲ್ಲಿ ಕೋವಿಡ್-19 ಪತ್ತೆಯಾಗಿದೆ.
ಮಯೂರ್ಭಂಜ್ ಜಿಲ್ಲೆಯ ಠಾಕುರ್ಮುಂಡಾ ಬ್ಲಾಕ್ನ ಚಮಕ್ಪುರ ವಸತಿ ಶಾಲೆಯ ವಿದ್ಯಾರ್ಥಿನಿಯರಲ್ಲಿ ಸೋಂಕು ಕಾಣಿಸಿದೆ. ಉಳಿದ ವಿದ್ಯಾರ್ಥಿನಿಯರಲ್ಲಿ ನೆಗಡಿ, ಕೆಮ್ಮಿನ ಲಕ್ಷಣ ಕಂಡು ಬಂದಿರುವ ಕಾರಣ ಸ್ವ್ಯಾಬ್ ಮಾದರಿ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಸತಿ ಶಾಲೆಯಲ್ಲಿ 20 ಸಿಬ್ಬಂದಿ ಸೇರಿದಂತೆ ಒಟ್ಟು 259 ವಿದ್ಯಾರ್ಥಿಗಳಿದ್ದಾರೆ. ಇದೀಗ ಸೋಂಕು ಕಾಣಿಸಿರುವ ಎಲ್ಲರನ್ನ ಪ್ರತ್ಯೇಕವಾಗಿರಿಸಲಾಗಿದೆ.