ಒಡಿಶಾ : ಒಡಿಶಾದಲ್ಲಿ ಸರ್ಕಾರಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಸ್ಮಾರ್ಟ್ ಆರೋಗ್ಯ ಕಾರ್ಡ್ ವಿತರಣೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಚಾಲನೆ ನೀಡಿದರು.
ಈ ಯೋಜನೆಯನ್ನು ರಾಜ್ಯದ ಗಜಪತಿ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಇದರಿಂದ ಜಿಲ್ಲೆಯ ಸುಮಾರು 1.35 ಲಕ್ಷ ಜನರಿಗೆ ನೆರವಾಗಲಿದೆ. ಚಿಕಿತ್ಸೆಗಾಗಿ ಆರ್ಥಿಕ ಹೊರೆ ಕಡಿಮೆ ಮಾಡಲಿದೆ ಎಂದರು.
ಪಟ್ನಾಯಕ್ ಅವರು ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದರು ಮತ್ತು ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆಯಲ್ಲಿ ಒಳಗೊಂಡ ಜನರಿಗೆ ಸ್ಮಾರ್ಟ್ ಆರೋಗ್ಯ ಕಾರ್ಡ್ಗಳನ್ನು ವಿತರಿಸಿದರು. ಇದಕ್ಕೂ ಮುನ್ನ ಮಲ್ಕನಗಿರಿ, ಸುಂದರ್ಗಡ ಮತ್ತು ಬೋಳಂಗೀರ್ ನಲ್ಲಿ ಸ್ಮಾರ್ಟ್ ಹೆಲ್ತ್ ಕಾರ್ಡ್ ವಿತರಣೆ ಮಾಡಿದ್ದರು.
ಜನರು ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಾಗದೆ ಭೂಮಿ, ಚಿನ್ನ ಮಾರುತ್ತಾರೆ. ಇಂತಹ ಸುದ್ದಿ ಕೇಳಿ ಬೇಸರವಾಗಿತ್ತು. ಈಗ ದೇಶದ 200ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಈ ಸೇವೆ ಆರಂಭವಾಗಿದ್ದು, ಈ ಕಾರ್ಡ್ ಬಳಸಿ ಫಲಾನುಭವಿಗಳು ಆರೋಗ್ಯ ಸೇವೆ ಪಡೆಯಬಹುದು ಎಂದು ಮುಖ್ಯಮಂತ್ರಿ ಹೇಳಿದರು.