ಜೋಧ್ಪುರ್: ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಈ ಸಿನಿಮಾವು ಕೋವಿಡ್ಗೆ ಭಾರತೀಯ ವ್ಯಾಕ್ಸಿನ್ ತಯಾರಿಸಿದ ಘಟನೆಯನ್ನು ಆಧರಿಸಿದೆ. ಇದೀಗ ಈ ಸಿನಿಮಾ ಬಗ್ಗೆ ಪ್ರಧಾನಿ ಮೋದಿ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಪ್ರಶಂಸಿದ್ದು, ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರನ್ನು ಅಭಿನಂದಿಸಿದ್ದಾರೆ.
ಜೋಧ್ಪುರ್ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಭಾಷಣದ ಮಧ್ಯೆ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಪ್ರಶಂಸಿದರು. ”ದಿ ವ್ಯಾಕ್ಸಿನ್ ವಾರ್’ ಹೆಸರಿನ ಸಿನಿಮಾ ಒಂದು ಇತ್ತೀಚೆಗೆ ಬಂದಿದೆ ಎಂದು ನಾನು ಕೇಳ್ಪಟ್ಟೆ. ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಟಕ್ಕೆ ನಮ್ಮ ವಿಜ್ಞಾನಿಗಳು ಹಗಲು-ರಾತ್ರಿ ಪಟ್ಟ ಶ್ರಮ, ತಮ್ಮ ಲ್ಯಾಬ್ನಲ್ಲಿ ಋಷಿಗಳ ರೀತಿಯಲ್ಲಿ ಮಾಡಿದ ಸಾಧನೆ, ಅದರಲ್ಲಿಯೂ ನಮ್ಮ ಮಹಿಳಾ ವಿಜ್ಞಾನಿಗಳು ಮಾಡಿರುವ ಸಾಧನೆಯನ್ನು ‘ದಿ ವ್ಯಾಕ್ಸಿನ ವಾರ್’ ಸಿನಿಮಾದಲ್ಲಿ ಅದ್ಭುತ ರೀತಿಯಲ್ಲಿ ತೋರಿಸಲಾಗಿದೆ. ಆ ಸಿನಿಮಾ ಇದೇ ವಾರ ತೆರೆಗೆ ಬಂದಿದೆ” ಎಂದಿದ್ದಾರೆ ಮೋದಿ.
“ನಮ್ಮ ವಿಜ್ಞಾನಿಗಳು ಇಷ್ಟು ಅದ್ಭುತವಾದ ಕಾರ್ಯ ಮಾಡಿದ್ದಾರೆಯೇ ಎಂದು ಆ ಸಿನಿಮಾ ನೋಡಿದ ಬಳಿಕ ಪ್ರತಿ ಭಾರತೀಯನಿಗೂ ಹೆಮ್ಮೆ ಎನಿಸುತ್ತಿದೆ. ಚಂದ್ರಯಾನ ನಡೆಯುತ್ತದೆ, ನಮ್ಮ ವಿಜ್ಞಾನಿಗಳ ಬಗ್ಗೆ ಗೌರವ ಹೆಚ್ಚುತ್ತದೆ. ವ್ಯಾಕ್ಸಿನ್ ನಿರ್ಮಾಣ ಆಗುತ್ತದೆ ನಮ್ಮ ವಿಜ್ಞಾನಿಗಳಿಗೆ ಗೌರವ ಸಂದಾಯವಾಗುತ್ತದೆ. ದೇಶದ ಯುವಕರು ವಿಜ್ಞಾನಿಗಳ ಬಗ್ಗೆ ವಿಜ್ಞಾನದ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ ಎಂದಿದ್ದಾರೆ. ”ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿರ್ಮಿಸಿದ ತಂಡಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಸಿನಿಮಾ ಮೂಲಕ ನೀವು ದೇಶದ ವಿಜ್ಞಾನಿಗಳು ಹಾಗೂ ವಿಜ್ಞಾನಕ್ಕೆ ಮಹತ್ವ ನೀಡಿದ್ದೀರಿ. ಈ ನಿಮ್ಮ ಕಾರ್ಯವು ಮುಂಬರುವ ಪೀಳಿಗೆಗೆ ಉಪಯುಕ್ತವಾಗಲಿದೆ” ಎಂದಿದ್ದಾರೆ.