ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗು ಅವರ ಮಗನಿಗೆ ಜೀವಬೆದರಿಕೆ ಹಾಕಿದ ೧೯ ವರ್ಷದ ವಿದ್ಯಾರ್ಥಿಯನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಏಕನಾಥ್ ಶಿಂಧೆ ಹಾಗು ಅವರ ಪುತ್ರ ಸಂಸದ ಶ್ರೀಕಾಂತ್ ಶಿಂಧೆ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಜೀವ ಬೆದರಿಕೆ ಹಾಕಿದವನನ್ನು ಶುಭಂ ವಾರ್ಕಾಡ್ ಎಂದು ಗುರುತಿಸಲಾಗಿದೆ. ಪುಣೆಯ ಕಾಲೇಜ್ ಒಂದರಲ್ಲಿ ಓದುತ್ತಿದ್ದ ಈತ ನಾಂದೇಡ್ ಜಿಲ್ಲೆಯವನೆಂದು ತಿಳಿದುಬಂದಿದೆ.
ಫೆ.11 ರಂದು ಸಿಎಂ ಹಾಗು ಅವರ ಪುತ್ರನಿಗೆ ಸಾಮಾಜಿಕ ಮಾಧ್ಯಮದಲ್ಲಿ ಕೊಲೆ ಬೆದರಿಕೆ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ಜಿ-ಮೇಲ್ ಹಾಗೂ ಐಪಿ ಅಡ್ರೆಸ್ ಮೂಲಕ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಆರೋಪಿ ಶುಭಂ ವಿರುದ್ಧ ಐಪಿಸಿ ಸೆಕ್ಷನ್ 506(2) ಅಡಿ ಪ್ರಕರಣ ದಾಖಲಾಗಿದ್ದು, ಬೆದರಿಕೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ.