News Karnataka Kannada
Monday, May 06 2024
ಮಹಾರಾಷ್ಟ್ರ

ಗಾಯನ ನಿಲ್ಲಿಸಿದ  ದೇಶದ ಗಾನ ಕೋಗಿಲೆ

Latha Mangeshwar
Photo Credit :

ದೇಶದ ಗಾಯನ ಕೋಗಿಲೆ ಎಂದೇ ಗುರುತಿಸಲ್ಪಡುವ  ಲತಾ ಮಂಗೇಶ್ಕರ್  ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ  ಭಾನುವಾರ ಉಸಿರು ನಿಲ್ಲಿಸಿದ್ದಾರೆ. ಸೆಪ್ಟೆಂಬರ್ 28, 1929 ರಂದು ಜನಿಸಿದ ಲತಾ ಅವರು ಸುಮಾರು 22 ಭಾಷೆಗಳಲ್ಲಿ 30  ಸಾವಿರಕ್ಕೂ  ಅಧಿಕ ಹಾಡುಗಳನ್ನು   ಹಾಡಿದ್ದಾರೆ.

1967 ರಲ್ಲಿ ಬಿಡುಗಡೆಯಾದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಕನ್ನಡ ಚಲನಚಿತ್ರದಲ್ಲಿನ “ಬೆಳ್ಳನೆ ಬೆಳಗಾಯಿತು” ಮತ್ತು “ಎಲ್ಲಾರೆ ಇರತೀರೋ ಎಂದಾರೆ ಬರತೀರೋ” ಹಾಡುಗಳನ್ನು ಹಾಡಿದ್ದಾರೆ. ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಹಾಗೂ ಶ್ರವಂತಿ  ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು.

ದಂಪತಿಗಳಿಗೆ ಲತಾ, ಆಶಾ, ಮೀನಾ, ಉಷಾ ಎಂಬ ನಾಲ್ಕು ಹೆಣ್ಣು ಮಕ್ಕಳಲ್ಲದೆ ಹೃದಯನಾಥ್ ಎಂಬ ಗಂಡುಮಗನೂ ಇದ್ದಾನೆ.  ಲತಾ ಅವರ ಮೊದಲ ಹೆಸರು “ಹೇಮಾ” ಎಂದು.  “ಭಾವ್ ಬಂಧನ್” ನಾಟಕದಲ್ಲಿ ಮಾಡಿದ ಅಭಿನಯನದ ನಂತರ ಅವರ ಹೆಸರು ಲತಾ ಎಂದಾಯಿತು. ಲತಾಗೆ ಔಪಚಾರಿಕ ಶಿಕ್ಷಣವೇನೂ ದೊರೆಯಲಿಲ್ಲ.

ಒಂದು ದಿನ ಶಾಲೆಗೆ ಹೋಗಿದ್ದರು. ಮರುದಿನ ತಮ್ಮ ತಂಗಿ ಆಶಾಳ ಜೊತೆ ಶಾಲೆಗೆ ಹೋದಾಗ ಶಿಕ್ಷಕರು ಗದರಿದರಂತೆ. ಸರಿ. ಲತಾ ಮುಂದೆ ಎಂದೂ ಶಾಲೆಯ ಮೆಟ್ಟಿಲು ಹತ್ತುವುದಿಲ್ಲವೆಂದು ಪಣತೊಟ್ಟರು. ಸಣ್ಣ-ಪುಟ್ಟ ನಾಟಕಗಳಲ್ಲಿ ಕಾಣಿಸಿಕೊಂಡರು. ತಾವು ತುಂಬಾ ತುಂಟತನ ಮಾಡುತ್ತಿದ್ದೆ ಎಂದು ಲತಾ ನೆನಪಿಸಿಕೊಂಡಿದ್ದಾರೆ.

ತಮ್ಮ ತಂದೆಯ ನಿರ್ದೇಶನದ ‘ಸಂಗೀತ್ ಸೌಭದ್ರ್’, ನಾಟಕದ ನಾರದನ ಪಾತ್ರಧಾರಿ ಏನೋ ಕಾರಣದಿಂದ ಬರಲಿಲ್ಲ. ಲತಾ, ತಂದೆಯವರನ್ನು ಒಪ್ಪಿಸಿ ತಾವೇ ಅದನ್ನು ಮಾಡಿದರು. 8 ವರ್ಷದ ಲತಾ ಒನ್ಸ್ ಮೋರ್, ಗಿಟ್ಟಿಸಿಕೊಂಡರು. ತಂದೆಯೇ ಅವರ ಪ್ರಥಮ ಗುರು.  ಅವರಿಗೆ ಶಾಸ್ತ್ರೀಯ ಸಂಗೀತ ಗಾಯಕಿಯಾಗುವ ಹಂಬಲವಿತ್ತು. ಆದರೆ ತಂದೆ 41 ನೇ ವರ್ಷದಲ್ಲೇ ತೀರಿಕೊಂಡಾಗ 13   ವರ್ಷದ ಬಾಲಕಿ ಲತಾ ಹೆಗಲ ಮೇಲೆ ಮನೆಯ ಜವಾಬ್ದಾರಿ ಬಿತ್ತು. ತಾಯಿ, 3 ಜನ ತಂಗಿಯರು, ಒಬ್ಬ ತಮ್ಮ, ಇವರುಗಳ ದೊಡ್ಡ ಪರಿವಾರವನ್ನು ನೋಡಿಕೊಳ್ಳಬೇಕಾಗಿ ಬಂತು. ಅವರು ಮರಾಠಿ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ  ಮಾಡಿದರು. 1942 ರಲ್ಲಿ ಪ್ರಾರಂಭ ಮಾಡಿದ ಮರಾಠಿ ಚಿತ್ರ ಕಿತೀ ಹಸಾಲ್ ನಲ್ಲಿ ಅವರು ಹಾಡಿದರೂ ಕಾರಣಾಂತರಗಳಿಂದ
ಅವರ ಗಾಯನ ಸೇರ್ಪಡೆಯಾಗಲಿಲ್ಲ. ‘ಮಂಗಳಗೌರ್’ ಚಿತ್ರದಲ್ಲಿ ನಟಿಸಿದ್ದರು.

1947 ರಲ್ಲಿ ಹಿಂದಿ ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡುವ ಅವಕಾಶ ಸಿಕ್ಕಿತು. ‘ಆಪ್ ಕಿ ಸೇವಾಮೆ’, ‘ಪಾಂ ಲಾಗೂ ಕರ್ ಚೋರಿರೇ’ ಎಂಬ ಹಾಡುಗಳನ್ನು ಹಾಡಿದರು. ನಂತರ ಅವರು ಹಿಂತಿರುಗಿ ನೋಡಲಿಲ್ಲ. ಲತಾ ಅವರು ಬಹುಶಃ ಹಿಂದಿಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಇದಕ್ಕೆ ಒಂದೇ ಅಪವಾದವೆಂದರೆ ಓ.ಪಿ. ನಯ್ಯರ್. ಅದೇ ರೀತಿ ಅವರೊಂದಿಗೆ ಹಿಂದಿಯ ಪ್ರತಿಯೊಬ್ಬ ಗಾಯಕನ ಜೊತೆಯೂ ಹಾಡಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ನಟಿಯಾರಿಗಾಗಿ ಲತಾ ಹಾಡಿದ್ದಾರೆ.  ಗಜಲ್, ಪ್ರೇಮಗೀತೆ, ಭಜನೆ, ಜನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ … ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿಯಲ್ಲದೆ ಭಾರತದ ಪ್ರತಿಯೊಂದು ಭಾಷೆಯಲ್ಲೂ ಅವರು ಹಾಡಿದ್ದಾರೆ.  ಲತಾ ಅವರು ವಿವಾಹವಾಗಲಿಲ್ಲ.

ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು. ಲತಾ ಅವರ ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂಗೀತ ಕ್ಷೇತ್ರದಲ್ಲಿರುವುದು ಒಂದು ವಿಶೇಷ.  1962 ರ ಚೀನಾ-ಭಾರತ ಯುದ್ಧದಲ್ಲಿ ಭಾರತದ  ನೂರಾರು ಸೈನಿಕರು  ಹುತಾತ್ಮರಾದರು. ಇವರ ನೆನಪಿನಲ್ಲಿ ಒಂದು ವಿಶೇಷ ಗೀತೆಯನ್ನು ಪ್ರದೀಪ್ ಎಂಬ ಕವಿ ರಚಿಸಿದರು.

ಈ ಗೀತೆಯನ್ನು ಸಿ. ರಾಮಚಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಅವರು 1963 ರ  ಜನವರಿ 26 ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಾಡಿದರು. “ಐ ಮೇರೆ ವತನ್ ಕೇ ಲೋಗೋಂ, ಜರಾ ಆಂಖ್ ಮೇ ಭರಲೋ ಪಾನಿ … ” ಎಂದು ಪ್ರಾರಂಭವಾಗುವ ಗೀತೆಯನ್ನು ಕೇಳಿ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಕಣ್ಣಿನಲ್ಲಿ ನೀರಾಡಿತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ ಕಾರ್ಯಕ್ರಮದ ನಂತರ ಮಾತಾಡಿ “ನೀನು ನನ್ನನ್ನು ಅಳಿಸಿಬಿಟ್ಟೆ,” ಎಂದು ಭಾವುಕರಾಗಿ ಹೇಳಿದರಂತೆ. ಈ ಹಾಡನ್ನು  ಪ್ರತೀ ವರ್ಷ ಜನವರಿ 26 ರಂದು ಸಮಾರಂಭದಲ್ಲಿ ಕೇಳಬಹುದಾಗಿದೆ.

ದೇಶದಲ್ಲಿ ಸುಮಾರು 7 ದಶಕಗಳ ಕಾಲ ತಮ್ಮ ಗಾಯನ ಸುಧೆಯನ್ನು ಉಣಿಸಿದ ಲತಾ ಅವರಿಗೆ ನ್ಯೂಯಾರ್ಕ್‌ ವಿಶ್ವವಿದ್ಯಾಲಯವೂ ಸೇರಿದಂತೆ 6  ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್  ನೀಡಿವೆ. ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು,  ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಭಾರತರತ್ನ,ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿಗೆ   ಇವರು ಭಾಜನರಾಗಿದ್ದರು.

1974ರ ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ ಆವೃತ್ತಿಯು ಲತಾ ಮಂಗೇಶ್ಕರ್‌ ಅವರನ್ನು ಅತಿ ಹೆಚ್ಚು ರೆಕಾರ್ಡ್‌ ಮಾಡಿದ ಕಲಾವಿದೆ ಎಂದು ಪಟ್ಟಿ ಮಾಡಿದೆ. ಅನಾರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಲತಾ ಮಂಗೇಶ್ಕರ್‌ ಅವರು 2015ರ ನಂತರ ಅವರು ಹಾಡುವುದನ್ನೇ ನಿಲ್ಲಿಸಿದರು.

ಅವರ ಕೊನೆಯ ಹಾಡು 2015ರಲ್ಲಿ ರೆಕಾರ್ಡ್‌ ಮಾಡಲಾಗಿತ್ತು. ಲತಾ ಅವರಂತಹ ಶ್ರೇ಼ಷ್ಟ ಗಾಯಕಿ ಹುಟ್ಟುವುದು ಬಹಳ ಅಪರೂಪ. ಗಾಯನ ಕೋಗಿಲೆ ಯ ಗೌರವಾರ್ಥ ಕೇಂದ್ರ ಸರ್ಕಾರ ಎರಡು ದಿನಗಳ ಶೋಕಾಚರಣೆ ಯನ್ನು ಘೋಷಿಸಿದೆ ಈ
ಕಾರಣಕ್ಕೆ ಮೈಸೂರು ಅರಮನೆಯಲ್ಲಿ ಪ್ರತಿನಿತ್ಯ ಸಂಜೆ 7 ರಿಂದ 8 ಗಂಟೆಯವರೆಗೆ ಧ್ವನಿ ಹಾಗೂ ದೀಪಾಲಂಕಾರವನ್ನು ಇಂದು ಮತ್ತು ನಾಳೆ ಕಡಿತಗೊಳಿಸಲಾಗಿದೆ ಎಂದು ಅರಮನೆಯ ಆಡಳಿತ ಮಂಡಳಿಯ ಉಪನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು