ಭಿಂಡ್: ಮಧ್ಯಪ್ರದೇಶ ರಾಜ್ಯದ ಭಿಂಡ್ ಜಿಲ್ಲೆಯಲ್ಲಿರುವ ಕಾರಾಗೃಹದ ಗೋಡೆಯೊಂದು ಕುಸಿದಿದೆ. ಅದರ ಪರಿಣಾಮ 22 ಕೈದಿಗಳು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.
ಶನಿವಾರ ಬೆಳಗಿನ ಜಾವ 5.10ರ ಸುಮಾರಿಗೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಾರಾಗೃಹದ ನಂ.6ನೇ ಕೊಠಡಿಯ ಗೋಡೆ ಕುಸಿದುಬಿದ್ದಿದೆ ಎಂದು ಎಸ್’ಪಿ ಮನೋಜ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ 22 ಕೈದಿಗಳು ಗಾಯಗೊಂಡಿದ್ದಾರೆ. 22 ಮಂದಿಯ ಪೈಕಿ ಓರ್ವ ಕೈದಿಯ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಕೈದಿಗಳನ್ನು ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವೇಳೆ ಕಾರಾಗೃಹದಲ್ಲಿ ಒಟ್ಟು 255 ಮಂದಿ ಕೈದಿಗಳಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.