ಗುಜರಾತ್ : 41 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಗಾಂಧಿನಗರ ಪುರಸಭೆಯನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್ 2 ಹಾಗೂ ಆಪ್ 1 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ. ಒಖಾ ಮತ್ತು ಥರಾ ಪುರಸಭೆಗಳನ್ನೂ ಬಿಜೆಪಿ ಗೆದ್ದುಕೊಂಡಿದೆ. ಭನ್ವಾಡ್ ಪುರಸಭೆ ಮಾತ್ರ ಕಾಂಗ್ರೆಸ್ ಪಾಲಾಗಿದೆ.
ಮುನ್ಸಿಪಲ್ ಚುನಾವಣೆಗೂ ಮಹತ್ವ ಬಂದಿದ್ದಕ್ಕೆ ಕಾರಣ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಪ್ ಗಳು ಈ ಬಾರಿ ಮೋದಿಯವರ ಮೂಲನೆಲದಲ್ಲೇ ಅವರ ಪಕ್ಷ ಕುಸಿದಿರುವುದನ್ನು ಸಾಬೀತುಪಡಿಸುತ್ತೇವೆ ಎಂದು ಹೇಳಿಕೊಂಡಿದ್ದರಿಂದ.
ಈ ಹಿನ್ನೆಲೆಯಲ್ಲಿ ಬಿಜೆಪಿ ಗೆಲುವು ಈ ಅಂಶಗಳನ್ನು ಸ್ಪಷ್ಟಪಡಿಸುತ್ತಿದೆ.
ಇತ್ತೀಚಿನ ಮುಖ್ಯಮಂತ್ರಿ ಬದಲಾವಣೆಯು ಬಿಜೆಪಿಯು ಗುಜರಾತಿನಲ್ಲಿ ಬಲ ಕಳೆದುಕೊಂಡಿರುವುದರ ಸಂಕೇತ ಎಂದು ಪ್ರತಿಪಕ್ಷಗಳು ವಾದಿಸುತ್ತಿದ್ದವು. ಆದರೆ ಸ್ಥಳೀಯವಾಗಿ ಜನ ಬಿಜೆಪಿಯೊಂದಿಗೇ ಇದ್ದಾರೆಂಬುದನ್ನು ಫಲಿತಾಂಶ ಹೇಳುತ್ತಿದೆ. ಮುಂದಿನ ವರ್ಷ ಗುಜರಾತ್ ವಿಧಾನಸಭೆ ಚುನಾವಣೆ ಇರುವುದರಿಂದ, ಬಿಜೆಪಿಯೇನಾದರೂ ಈಗ ಹಿನ್ನಡೆ ಅನುಭವಿಸಿದ್ದರೆ ಅದು ಮುಂದಿನ ಸೋಲಿನ ಸೂಚನೆ ಅಂತ ಪ್ರತಿಪಕ್ಷಗಳು ಮಾನಸಿಕವಾಗಿ ಮೇಲುಗೈ ಸಾಧಿಸಬಹುದಿತ್ತು. ಅದಾಗಿಲ್ಲ.
ಗಾಂಧಿನಗರದಲ್ಲಿ ತನ್ನೆಲ್ಲ ಬಲ ಪ್ರಯೋಗಿಸಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಗುಜರಾತಿನಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಅಧಿಕಾರ ಹಿಡಿದು ಬಿಜೆಪಿಗೆ ಬಿಸಿ ಮುಟ್ಟಿಸುತ್ತೇವೆ ಎಂದಿತ್ತು. ಫಲಿತಾಂಶವು ಆಪ್ ಗುಜರಾತಿನಲ್ಲಿ ನೆಲೆ ಕಾಣುವುದಕ್ಕೆ ಪಡಬೇಕಿರುವ ಪ್ರಯಾಸ ತುಂಬ ದೊಡ್ಡದಿದೆ ಎಂಬುದನ್ನು ಸಾರಿದೆ.
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ ಟ್ವಿಟ್ ಮಾಡಿರುವಂತೆ, ಗುಜರಾತಿನಲ್ಲಿ ಬಿಜೆಪಿ ಕಾರ್ಯಕರ್ತರು ಬೇರುಮಟ್ಟದಲ್ಲಿ ಸಂಘಟನೆಯನ್ನು ಗಟ್ಟಿಯಾಗಿಯೇ ಇಟ್ಟಿದ್ದಾರೆ ಎಂಬುದನ್ನೂ ಫಲಿತಾಂಶ ಸಾರಿದೆ.