ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಿವಾಸ ಮೇಲೆ ಇಂದು ಬೆಳಿಗ್ಗೆ (ಜುಲಾಯಿ 03) ಡ್ರೋಣ್ ಹಾರಾಟ ನಡೆಸಿದೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಬೆಳಿಗ್ಗೆ ಸುಮಾರು 5 ಗಂಟೆ ವೇಳೆಗೆ ಡ್ರೋಣ್ ಒಂದು ಪ್ರಧಾನಿಯವರ ನಿವಾಸದ ಮೇಲೆ ಹಾರಾಡುವುದು ಗಮನಕ್ಕೆ ಬಂದಿತ್ತು.
ಈ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಡ್ರೋಣ್ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಪ್ರಧಾನ ಮಂತ್ರಿಗಳ ನಿವಾಸ ‘ಹಾರಾಟ ನಿಷೇಧಿತ ವಲಯ’ದ ಅಡಿ ಬರುತ್ತದೆ. ತನಿಖೆ ಪ್ರಗತಿಯಲ್ಲಿದ್ದು, ಸಂಶಯಾಸ್ಪದವಾದುದ್ದು ಯಾವುದೂ ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪ್ರಧಾನಿ ಮೋದಿ ನಿವಾಸದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಪೂರ್ಣ ಹುಡುಕಾಟ ನಡೆಸಲಾಯಿತು. ಆದರೆ ಅಪಾಯಕಾರಿ ಯಾವುದೇ ವಸ್ತು ಪತ್ತೆಯಾಗಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ ರೂಮ್ (ಎಟಿಸಿ)ಯನ್ನು ಸಹ ಸಂಪರ್ಕಿಸಲಾಗಿದೆ. ಅವರು ಪ್ರಧಾನಿ ನಿವಾಸದ ಬಳಿ ಅಪಾಯಕಾರಿ ವಸ್ತುವನ್ನು ಪತ್ತೆ ಮಾಡಿಲ್ಲ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.