ದೆಹಲಿ: ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರು ಇಂದು ಯಾವುದೇ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ನಿಂದ ಅಧಿಕೃತ ಪತ್ರವೊಂದನ್ನು ಹೊರಡಿಸಲಾಗಿದೆ.
ಈ ಪತ್ರದಲ್ಲಿ ತಿಳಿಸಿರುವಂತೆ, “ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು 28.7.2023ರಂದು ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವುದಿಲ್ಲ. ಮುಖ್ಯ ನ್ಯಾಯಮೂರ್ತಿ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ವ್ಯಾಪ್ತಿಗೆ ಬರುವ ಯಾವುದೇ ಪ್ರಕರಣದ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಇಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಲಾಗಿದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಇಂದು ಡಿ.ವೈ ಚಂದ್ರಚೂಡ್ ಅವರು ವಿಚಾರಣೆ ನಡೆಸಬೇಕಿದ್ದ ಪ್ರಮುಖ ಪ್ರಕರಣಗಳೆಂದರೇ, ಮಣಿಪುರದಲ್ಲಿ ಮಹಿಳೆಯರ ನಗ್ನ ಮೆರವಣಿಗೆಯ ಕುರಿತಾದ ಪ್ರಕರಣ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಟೊಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿಯ ಮನವಿಯ ವಿಚಾರಣೆ, ಕುಖ್ಯಾತ ನಿಥಾರಿ ಹತ್ಯೆ ಪ್ರಕರಣದ ವಿಚಾರಣೆ ಸೇರಿದಂತೆ ಹಲವು ಪ್ರಕರಣದ ವಿಚಾರಣೆಯನ್ನು ನಡೆಸಿ ಆದೇಶ ನೀಡಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಎಲ್ಲವೂ ಮುಂದೂಡಲಾಗಿದೆ.