ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ, ಅಲ್ಲಿನ ಸಿಇಒಗಳ ಜತೆಗೆ ಹಾಗೂ ರಾಜತಾಂತ್ರಿಕ ವಿಚಾರಗಳ ಬಗ್ಗೆಯು ಸಭೆಯನ್ನು ನಡೆಸಿದ್ದಾರೆ, ಹಲವು ಒಪ್ಪಂದಗಳಿಗೂ ಸಹಿ ಹಾಕಿದ್ದು, ಫ್ರಾನ್ಸ್ ರಾಷ್ಟ್ರೀಯ ದಿನಚಾರಣೆಯಲ್ಲೂ ಭಾಗವಹಿಸಿದ್ದಾರೆ, ಇದರ ಜತೆಗೆ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ನ ಉನ್ನತ ನಾಗರಿಕ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿತ್ತು. ಇದೀಗ ಪ್ರಧಾನಿ ಫ್ರಾನ್ಸ್ ಪ್ರವಾಸ ಮುಗಿಸಿ ಯುಎಇ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಈ ಬಗ್ಗೆ ವಿದೇಶಾಂಗ ಖಾತೆ ವಕ್ತಾರ ಅರವಿಂದ ಬಾಗ್ಜಿ ಟ್ವೀಟ್ ಮಾಡಿದ್ದು, ಅಬುಧಾಬಿಯ ಕ್ರೌನ್ ಪ್ರಿನ್ಸ್, ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಪ್ರೀತಿಯಿಂದ ಬರಮಾಡಿಕೊಂಡರು ಎಂದು ತಿಳಿಸಿದ್ದಾರೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹಯಾನ್ರೊಂದಿಗೆ ಮಾತುಕತೆ ನಡೆಸಲಿರುವ ಅವರು ಇಂಧನ, ಆಹಾರ ಭದ್ರತೆ ಮತ್ತು ರಕ್ಷಣೆಯ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ಜತೆಗೆ ಕೆಲವು ಮಹತ್ವದ ಒಪ್ಪಂದಗಳಿಗೆ ಉಭಯ ದೇಶದ ನಾಯಕರು ಸಹಿ ಹಾಕಲಿದ್ದಾರೆ.