ಇಟಾನಗರ: ಭಾರಿ ಮಳೆಯಿಂದಾಗಿ ಅರುಣಾಚಲ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಕೆಲವು ಕಡೆಗಳಲ್ಲಿ ರಸ್ತೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸಿಯಾಂಗ್ ಜಿಲ್ಲೆಯಲ್ಲಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮವಾಗಿ ಬಿದಿರು ಮೆಳೆ ಸೇರಿದಂತೆ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ತೀವ್ರ ಹಾನಿಯುಂಟಾಗಿರುವ ವರದಿಯಾಗಿದೆ.
ಪ್ಯಾಂಗಿನ್-ಬೊಲೆಂಗ್ ಶಾಸಕ ಓಜಿಂಗ್ ಟಾಸಿಂಗ್ ಅವರು ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಜನರಿಗೆ ಅಗತ್ಯ ಸೇವೆ ಒದಗಿಸಲು, ಸಂಪರ್ಕ ಕಡಿತಗೊಂಡಿರುವ ರಸ್ತೆಗಳನ್ನು ಸರಿಪಡಿಸುವಂತೆ ಸೂಚಿಸಿದ್ದಾರೆ.
ಸಿಯಾಂಗ್ ಜಿಲ್ಲೆಯ ಜಿಲ್ಲಾಧಿಕಾರಿ ಅತುಲ್ ಟಯೇಂಗ್ ಗುರುವಾರ ‘ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಹಾಳಾಗಿದೆ. ಸಿಮಾಂಗ್ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ ಎಂದು ತಿಳಿಸಿದ್ದಾರೆ.