ಪಂಜಾಬ್ ; ಅಮೇರಿಕ ತನ್ನ ಸೈನಿಕರನ್ನು ಹಿಂಪಡೆದುಕೊಂಡ ಬೆನ್ನಿಗೆ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿದೆ. ತಾಲಿಬಾನ್ ಬಂಡುಕೋರರು ಭಾನುವಾರ ಕಾಬೂಲ್ ಪ್ರವೇಶಿಸಿ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ. ಅಘ್ಘಾನ್ನಲ್ಲಿ ಎದ್ದಿರುವ ಆಂತರಿಕ ಗಲಭೆಯಿಂದಾಗಿ ಅಲ್ಲಿ ನೆಲೆಸಿರುವ ಭಾರತೀಯ ರಾಯಭಾರ ಸಿಬ್ಬಂದಿಯನ್ನು ಮತ್ತು ನಾಗರಿಕರನ್ನು ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಮುಂದಿನ 48 ಗಂಟೆಗಳಲ್ಲಿ ಎಲ್ಲರನ್ನು ಭಾರತಕ್ಕೆ ವಾಪಸ್ ಕರೆತರುವ ಕೆಲಸ ಪೂರ್ಣಗೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯ ಭರವಸೆ ನೀಡಿದೆ.
ಇದರ ಬೆನ್ನಿಗೆ ಇಂದು ಕೇಂದ್ರ ಸರ್ಕಾರದ ಎದುರು ಮನವಿ ಸಲ್ಲಿಸಿರುವ ಪಂಜಾಬ್ ರಾಜ್ಯದ ಸಿಎಂ ಅಮರೀಂದರ್ ಸಿಂಗ್, “ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸಿಲುಕಿರುವ 200 ಸಿಖ್ಖರನ್ನು ಒಳಗೊಂಡಂತೆ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕು” ವಿನಂತಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್, “ಅಘ್ಘಾನಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇಡೀ ಆಘ್ಘನ್ ದೇಶವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಅಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಬೇಕಾದದ್ದು ನಮ್ಮ ಕರ್ತವ್ಯ. ಈ ಸ್ಥಳಾಂತರ ಕಾರ್ಯದಲ್ಲಿ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ನಮ್ಮ ಸರ್ಕಾರ ಸಿದ್ಧವಿದೆ” ಎಂದು ಪಂಜಾಬ್ ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, “ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸಿಲುಕಿರುವ ಸುಮಾರು 200 ಸಿಖ್ಖರು ಸೇರಿದಂತೆ ಎಲ್ಲಾ ಭಾರತೀಯರನ್ನು ತಕ್ಷಣವೇ ಸ್ಥಳಾಂತರಿಸಲು ವ್ಯವಸ್ಥೆ ಮಾಡಲು ನಾನು ಸಚಿವ ಡಾ.ಎಸ್.ಜೈಶಂಕರ್ ಅವರನ್ನು ಒತ್ತಾಯಿಸುತ್ತೇನೆ. ಅವರ ಸುರಕ್ಷಿತ ಸ್ಥಳಾಂತರಕ್ಕೆ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ನನ್ನ ಸರ್ಕಾರ ಸಿದ್ಧವಿದೆ” ಎಂದಿದ್ದಾರೆ.