News Karnataka Kannada
Tuesday, April 30 2024
ದೇಶ

ಐಸಿಸ್‌ ಭಯೋತ್ಪಾದಕ ಸಂಘಟನೆಗೆ ಯುವಕರ ಸೇರ್ಪಡೆಗೆ ಕೊಡಗಿನ ಮತಾಂತರ ಗೊಂಡ ಯುವತಿಯೇ ಮಾಸ್ಟರ್‌ ಮೈಂಡ್‌

Deepti Marla
Photo Credit :

ಮಂಗಳೂರು ; ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮತ್ತು ರಾಜ್ಯ ಪೊಲೀಸರ ನೇತೃತ್ವದಲ್ಲಿ ಸಂಘಟಿತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್(ಐಎಸ್) ನೊಂದಿಗೆ ಸಂಪರ್ಕ ಹೊಂದಿ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ ಗ್ಯಾಂಗ್‌ ನ್ನು ಭೇದಿಸಲಾಗಿದ್ದು , ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಂಕಿತರನ್ನು  ದೇಶದ ವಿವಿದೆಡೆ ಬಂಧಿಸಲಾಗಿದೆ.
ಬುಧವಾರ ಬೆಳಗಿನ ಝಾವವೇ ದೆಹಲಿಯಿಂದ ಬಂದಿದ್ದ ಎನ್‌ಐಏ ಅಧಿಕಾರಿಗಳ 24 ಜನರ ತಂಡ ಉಳ್ಳಾಲದಲ್ಲಿರುವ ಮಾಜಿ ಶಾಸಕ ಬಿ ಎಂ ಇದಿನಬ್ಬ ಅವರ ಮನೆ ಮೇಲೆ ಧಾಳಿ ನಡೆಸಿ ದಾಖಲೆಗಳನ್ನು ಮತ್ತು ಇದಿನಬ್ಬ ಅವರ ಮಗ ಬಿ ಎಂ ಭಾಷಾ ಆವರ ಪುತ್ರ ಮೊಹಮ್ಮದ್‌ ಅಮ್ಮಾರ್‌ ಮತ್ತು ಮರಿಯಂ ಎಂಬಾಕೆಯನ್ನು ವಶಕ್ಕೆ ಪಡೆದುಕೊಂಡಿದೆ.
ಬಂಧಿತ ಆರೋಪಿಗಳು ಸಾಮಾಜಿಕ ತಾಣಗಳಲ್ಲಿ ಐಸಿಸ್ ಪ್ರಚಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಾ ಯುವ ಮನಸ್ಸುಗಳ ಮೇಲೆ ಪ್ರಭಾವ ಬೀರುವ ಮೂಲಕ ಅವರನ್ನು ಐಸಿಸ್‌ ಗೆ  ಸೇರ್ಪಡೆ ಮಾಡುವ ಕೆಲಸ ಮಾಡುತಿತ್ತು ಎನ್ನಲಾಗಿದೆ. ಇದಲ್ಲದೆ ದೇಶದ ಸಂಘ ಪರಿವಾರದ ನಾಯಕರು ಮತ್ತು ಹಿಂದೂ ಮುಖಂಡರ ಹತ್ಯೆಯನ್ನು ಯೋಜಿಸುವ ಸಶಸ್ತ್ರ ಜಿಹಾದ್‌ಗಾಗಿ ಮುಸ್ಲಿಂ ಯುವಕರನ್ನು ಪ್ರೇರೇಪಿಸುತಿತ್ತು ಎಂದು ಹೇಳಲಾಗಿದೆ. ಇದಲ್ಲದೆ ಐಸಿಸ್‌ ಬಗ್ಗೆ ಸಹಾನುಭೂತಿ ಹೊಂದಿದವರಿಂದ ಹೊಂದಿರುವವರಿಂದ ಹಣವನ್ನು ಸಂಗ್ರಹಿಸಿ ನಂತರ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತಿತ್ತು ಎಂದು ಮೂಲಗಳು ತಿಳಿಸಿವೆ.
ಬಂಧಿತರಾದ ಐದು ಮಂದಿಯಲ್ಲಿ ಜಿಲ್ಲೆಯ ಗುಡ್ಡೆಹೊಸೂರು ಮೂಲದ ದೀಪ್ತಿ ಮಾರ್ಲ ಆಲಿಯಾಸ್‌ ಮರಿಯಂ ಯುವಕರ ಬ್ರೈನ್‌ ವಾಷ್‌ ಮಾಡುತಿದ್ದ ಈ ತಂಡದ ಮಾಸ್ಟರ್‌ ಮೈಂಡ್‌ ಎನ್ನಲಾಗಿದೆ. ಬಿ.ಎಂ. ಬಾಷಾ ಅವರ ಮೂರನೇ ಮಗನಾಗಿರುವ ಅಮ್ಮಾರ್‌ , ಹತ್ತು ವರ್ಷಗಳ ಹಿಂದೆ ಜಿಲ್ಲೆಯ ಹಿಂದು ಯುವತಿಯನ್ನು ಮದುವೆಯಾಗಿದ್ದ. ಹತ್ತು ವರ್ಷಗಳ ಹಿಂದೆ ದೇರಳಕಟ್ಟೆಯ ಮೆಡಿಕಲ್ ಕಾಲೇಜಿನಲ್ಲಿ ಬಿಡಿಎಸ್ ಓದುತ್ತಿದ್ದಾಗ ಇವರ ನಡುವೆ ಸಂಪರ್ಕ ಆಗಿತ್ತು. ಬಳಿಕ ಅದೇ ಸಮಯದಲ್ಲಿ ಇಬ್ರಾಹಿಂ ಬಾಷಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಲಫಿಗಳ ಸಮಾವೇಶ ನಡೆದಿತ್ತು. ಸಮಾವೇಶದಲ್ಲಿ ಯುವತಿ ಪಾಲ್ಗೊಂಡಿದ್ದಳು
ಎನ್ನಲಾಗಿತ್ತು. ಆನಂತರ ಅಮ್ಮಾರ್‌ ಜೊತೆಗೆ ಯುವತಿ ಮದುವೆಯಾಗಿದ್ದು ತನ್ನ ಹೆಸರನ್ನು ಮರಿಯಂ ಎಂದು ಪರಿವರ್ತನೆ ಮಾಡಿಕೊಂಡಿದ್ದಳು. ಅಮ್ಮಾರ್‌ ಜೊತೆಗೆ ಮದುವೆಯಾದ ನಂತರ ದೀಪ್ತಿ ತನ್ನ ಕುಟುಂಬದ ಜೊತೆಗಿನ ನಂಟನ್ನು ಕಡಿದುಕೊಂಡಿದ್ದಳು. ಹಾಸ್ಟೆಲ್ ನಲ್ಲಿ ಇದ್ದು ಬಿಡಿಎಸ್ ಓದುತ್ತಿದ್ದಾಗ ಅದು ಹೇಗೆ ಅಮ್ಮಾರ್‌ ಸಂಪರ್ಕ ಆಗಿತ್ತು. ಸಲಫಿಯಾಗಲು ಏನು ಪ್ರೇರಣೆಯಾಗಿತ್ತು ಎನ್ನುವುದು ಗೊತ್ತಾಗಿಲ್ಲ. ಆದರೆ, ಅಮ್ಮಾರ್‌ ಏನೂ ಹೆಚ್ಚು  ಓದಿಕೊಂಡವನಲ್ಲ ಎನ್ನಲಾಗುತ್ತಿದೆ. ದಕ್ಕೆಯಲ್ಲಿ ಒಂದೊಮ್ಮೆ ಮೀನು ಉದ್ಯಮವನ್ನು ನಡೆಸುತ್ತಿದ್ದ. ಆನಂತರ ವಿದೇಶಕ್ಕೆ ಹೋಗಿದ್ದ. ಈ ನಡುವೆ, ಪತ್ನಿ ಜೊತೆ ವಿದೇಶದಲ್ಲೇ  ಇದ್ದು ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ. ಊರಿಗೆ ಬಂದರೆ, ಮನೆಯಲ್ಲಿ ಕಂಪ್ಯೂಟರ್ ಜೊತೆಗೇ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ. ಆದರೆ ತುಂಬ ಹೈಫೈ ಆಗಿ ಗುರುತಿಸಿಕೊಂಡಿದ್ದ  ಎನ್ನುವ ಮಾಹಿತಿಯನ್ನು ಸ್ಥಳೀಯರು ಹೇಳುತ್ತಾರೆ. ಇವರಿಬ್ಬರೂ ಆನ್‌ಲೈನ್‌ ಮೂಲಕವೇ   ಯುವಕರನ್ನು ಉಗ್ರವಾದದೆಡೆಗೆ ಸೆಳೆಯುತಿದ್ದರು ಮತ್ತು ಐಸಿಸ್‌ ನ ಪರ ನೇಮಕಾತಿ ಮಾಡುತಿದ್ದರು ಎಂದೂ ಆರೋಪಿಸಲಾಗಿದೆ. ಅದರೆ ಪೋಲೀಸರ ವಶದಲ್ಲಿರುವ ಮರಿಯಂ ಅಮ್ಮಾರ್‌ ನ ಪತ್ನಿ ಅಲ್ಲ ಎಂದೂ ಹೇಳಲಾಗುತಿದ್ದು ನಿಖರ ಮಾಹಿತಿ ತಿಳಿದು ಬಂದಿಲ್ಲ. ಇವರು ಇನ್ಸ್ಟಾಗ್ರಾಮ್ ನ “ಕ್ರಾನಿಕಲ್ ಫೌಂಡೇಶನ್” ಎಂಬ ಚಾನೆಲ್‌ ಸೇರಿಕೊಂಡು ಯುವಕರನ್ನು ಪ್ರಚೋದಿಸುತಿದ್ದರು. ಈ ಗುಂಪಿಗೆ ಪ್ರಪಂಚದಾದ್ಯಂತ 5,000 ಕ್ಕೂ ಹೆಚ್ಚು ಸದಸ್ಯರು ಇದ್ದಾರೆ.

ಬುಧವಾರವೇ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಒಬೈದ್ ಹಮೀದ್, ಬಂಡಿಪೋರಾ ಜಿಲ್ಲೆಯ ಮುಜಾಮಿಲ್ ಹಸನ್ ಬಟ್, ಬೆಂಗಳೂರಿನಲ್ಲಿ ಶಂಕರ್ ವೆಂಕಟೇಶ ಪೆರುಮಾಳ್ ಅಲಿಯಾಸ್ ಆಲಿ ಮೌವಿಯಾ ಎಂಬವರನ್ನು ಎನ್ಐಎ ತಂಡ ಬಂಧಿಸಿದೆ. ಜಮ್ಮು ಕಾಶ್ಮೀರ ಮತ್ತು ಬೆಂಗಳೂರು ಹಾಗೂ ಮಂಗಳೂರಿನಲ್ಲಿ ದಾಳಿಗೆ ಒಳಗಾದವರು ಒಬ್ಬರಿಗೊಬ್ಬರು ಸಂಪರ್ಕ ಹೊಂದಿದ್ದಲ್ಲದೆ, ಕಳೆದ ಮಾರ್ಚ್ ತಿಂಗಳಲ್ಲಿ ಕೇರಳದಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಮೊಹಮ್ಮದ್ ಅಮೀನ್ ಜೊತೆಗೆ ನಿಕಟ ಸಂಪರ್ಕದಲ್ಲಿದ್ದರು. 2020 ರ ಮಾರ್ಚ್ ತಿಂಗಳಲ್ಲಿ ಹಿಜ್ರಾ ಭೇಟಿಗೆಂದು ಕಾಶ್ಮೀರಕ್ಕೆ ತೆರಳಿದ್ದ ಮೊಹಮ್ಮದ್ ಅಮೀನ್ ಅಲ್ಲಿನ ಉಗ್ರರ ಜೊತೆಗೆ ಸಂಪರ್ಕ ಸಾಧಿಸಿದ್ದ.‌ ಅಲ್ಲದೆ, ಐಸಿಸ್ ಉಗ್ರವಾದಿ ಸಂಘಟನೆಗೆ ಯುವಕರನ್ನು ಸೇರಿಸಲು ಹಣ ಸಂಗ್ರಹಕ್ಕೆ ತೊಡಗಿದ್ದ. ಇದೇ ಕಾರಣಕ್ಕೆ ಕಾಶ್ಮೀರದ ಉಗ್ರರಾದ ಮಹಮ್ಮದ್ ವಕಾರ್ ಲೋನ್ ಮತ್ತು ಆತನ ಸಹಚರರನ್ನು ಭೇಟಿಯಾಗಿದ್ದ. ಮೊಹಮ್ಮದ್ ಅಮೀನ್ ಭಾರತದ ವಿವಿಧೆಡೆಯಲ್ಲಿ ಯುವಕರನ್ನು ಐಸಿಸ್ ನೆಟ್ವರ್ಕ್ ಸೇರಿಸಲು ಪ್ರಯತ್ನ ಪಟ್ಟಿದ್ದಾನೆ. ಆತನ ಸಹಚರರು ಕೇರಳ, ಕರ್ನಾಟಕ ಮತ್ತು ಇತರ ಕಡೆಗಳಲ್ಲಿ ತೀವ್ರವಾದಿ ಮನಸ್ಸಿನ ಯುವಕರನ್ನು ಐಸಿಸ್ ಉಗ್ರ ಸಂಘಟನೆಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಇಂದು ಬಂಧನಕ್ಕೊಳಗಾಗಿರುವ ಐದು ಮಂದಿ ಹಣ
ಸಂಗ್ರಹಿಸಿ, ಕಾಶ್ಮೀರದ ಉಗ್ರ ಮಹಮ್ಮದ್ ವಕಾರ್ ಲೋನ್ ಗೆ ವರ್ಗಾವಣೆ ಮಾಡುತ್ತಿದ್ದರು.‌ ಮೊಹಮ್ಮದ್ ಅಮೀನ್ ಸೂಚನೆಯಂತೆ ಆರೋಪಿಗಳು ಕಾಶ್ಮೀರದ ಉಗ್ರರಿಗೆ ಹಣ ರವಾನೆ ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಎನ್ಐಎ ಅಧಿಕಾರಿಗಳು ತನಿಖೆಯಲ್ಲಿ  ಪತ್ತೆ ಮಾಡಿದ್ದಾರೆ.‌ ದಾಳಿ ವೇಳೆ ಅವರು ಇದಕ್ಕೆ ಪೂರಕವಾಗಿ ಲ್ಯಾಪ್‌ಟಾಪ್, ಮೊಬೈಲ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಹಲವಾರು ಸಿಮ್ ಕಾರ್ಡ್, ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿದ್ದು ಅವನ್ನು ವಶಕ್ಕೆ ಪಡೆದಿದ್ದಾರೆ.‌
ಎನ್ಐಎ ಅಧಿಕಾರಿಗಳು ಕಳೆದ ಮಾರ್ಚ್ 5ರಂದು ಕೇರಳ ಮೂಲದ ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಯಾಹ್ಯಾ ಮತ್ತು ಈತನ ಸಹಚರರ ವಿರುದ್ಧ ಹಲವೆಡೆ ಯುವಕರನ್ನು ಐಸಿಸ್ ಸೇರ್ಪಡೆ  ಮಾಡುತ್ತಿರುವುದು ಸೇರಿದಂತೆ ಐಸಿಸ್ ಪ್ರೇರಿತ ಚಾನೆಲ್ ಗಳನ್ನು ಟೆಲಿಗ್ರಾಂ, ಹೂಪ್‌ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ ನಡೆಸುತ್ತಿದ್ದ ಆರೋಪದಲ್ಲಿ ದೇಶದ್ರೋಹ ಸೇರಿ
ವಿವಿಧ ಕಾಯ್ದೆಗಳಡಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಆನಂತರ ಅದೇ ಪ್ರಕರಣದಲ್ಲಿ ವಿವಿಧ ಕಡೆಗಳಿಗೆ ದಾಳಿ ನಡೆಸಿ, ಮೊಹಮ್ಮದ್ ಅಮೀನ್, ಡಾ.ರಹೀಸ್ ರಶೀದ್ ಮತ್ತು ಮುಶಾಬ್ ಅನ್ವರ್ ಎಂಬವರ‌ನ್ನು ಬಂಧಿಸಿದ್ದರು. ಮೊಹಮ್ಮದ್ ಅಮೀನ್ ವಿಚಾರಣೆ ವೇಳೆ ಮಹತ್ವದ ಮಾಹಿತಿಗಳನ್ನು ಹೊರಬಿಟ್ಟಿದ್ದು ತನ್ನ ಮತ್ತು ಐಸಿಸ್ ನೆಟ್ವರ್ಕ್ ಜೊತೆಗಿನ ಸಂಬಂಧವನ್ನು ಬಾಯಿಬಿಟ್ಟಿದ್ದ. ಅದರಂತೆ, ಎನ್ಐಎ ಅಧಿಕಾರಿಗಳು ಇದೀಗ ಮಂಗಳೂರು, ಬೆಂಗಳೂರು ಮತ್ತು ಜಮ್ಮು ಕಾಶ್ಮೀರದ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ‌
2015ರಲ್ಲಿ ಬಿ.ಎಂ.ಬಾಷಾ ಅವರ ಹಿರಿಯ ಮಗಳ ಪುತ್ರಿ, ಕಾಸರಗೋಡಿಗೆ ಮದುವೆಯಾಗಿದ್ದ ಅಜ್ಮಳಾ ನಾಪತ್ತೆಯಾಗಿದ್ದಳು. ಪತಿಯ ಜೊತೆಗೆ ನಾಪತ್ತೆಯಾಗಿದ್ದ ಈಕೆ, ಬಳಿಕ ಕುವೈತ್ ಮೂಲಕ ಐಸಿಸ್ ಸೇರ್ಪಡೆಯಾಗಿದ್ದಾಳೆ ಎನ್ನಲಾಗಿತ್ತು. ಈ ವಿಚಾರದ ಬಗ್ಗೆ ಕೇರಳದ ಎನ್ಐಎ ತಂಡ ಮತ್ತು ಗುಪ್ತಚರ ಇಲಾಖೆ ಸಾಕಷ್ಟು ತನಿಖೆ ನಡೆಸಿತ್ತು. ಕಾಸರಗೋಡಿನ ಪಡನ್ನ ಪಂಚಾಯತ್ ವ್ಯಾಪ್ತಿಯಲ್ಲಿ ಮಿಸ್ಸಿಂಗ್ ಆಗಿದ್ದ 22 ಮಂದಿಯಲ್ಲಿ ಅಜ್ಮಳಾ ಕೂಡ ಒಬ್ಬಳು.,ಈ ತಂಡದ ಮೂಲಕ ಐಸಿಸ್‌ ಸೇರ್ಪಡೆಯಾಗಿದ್ದ ಈ ನಾಲ್ಕು ಮಹಿಳೆಯರು ಇದೀಗ ಅಫ್ಘಾನಿಸ್ಥಾನದಲ್ಲಿ ಇದ್ದು ಭಾರತಕ್ಕೆ ವಾಪಾಸ್‌ ಬರುವುದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕೋರಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಾಸ್‌ ಬರಲು ಅನುಮತಿ ನಿರಾಕರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 3 / 5. Vote count: 3

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು