ವಾಷಿಂಗ್ಟನ್: ಅಮೆರಿಕದ ಮಿಸೌರಿ ರಾಜ್ಯದಲ್ಲಿ ಸುಂಟರಗಾಳಿ ಅಪ್ಪಳಿಸಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇಂಟ್ ಲೂಯಿಸ್ನಿಂದ ದಕ್ಷಿಣಕ್ಕೆ 100 ಮೈಲುಗಳಷ್ಟು ದೂರದಲ್ಲಿರುವ ಗ್ಲೆನ್ ಅಲೆನ್ ಎಂಬ ಪಟ್ಟಣ ಸುಂಟರಗಾಳಿಯ ವಿಕೋಪಕ್ಕೆ ಈಡಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಹನ್ನೆರಡು ಕಟ್ಟಡಗಳು ನಾಶವಾಗಿವೆ ಮತ್ತು ಡಜನ್ ಗಟ್ಟಲೇ ಕಟ್ಟಡಗಳು, ಸಮುಚ್ಚಯಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಹಾನಿಯು ವ್ಯಾಪಕವಾಗಿದ್ದು, ಹೃದಯವಿದ್ರಾವಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಸೌರಿ ಗವರ್ನರ್ ಮೈಕ್ ಪಾರ್ಸನ್ ಅವರು ಚಂಡಮಾರುತ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ತೀವ್ರ ಗಾಳಿಯಿಂದ ಪ್ರಭಾವಿತವಾಗಿರುವ ಡೆಟ್ರಾಯಿಟ್ ಮೆಟ್ರೋಪಾಲಿಟನ್ ವೇಯ್ನ್ ಕೌಂಟಿ ವಿಮಾನ ನಿಲ್ದಾಣ ಮತ್ತು ಚಿಕಾಗೋದ ಓ’ಹೇರ್ ಮತ್ತು ಮಿಡ್ವೇ ವಿಮಾನ ನಿಲ್ದಾಣಗಳಲ್ಲಿ ಬುಧವಾರ ಬೆಳಗ್ಗೆ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಈ ಋತುವಿನ ಆರಂಭಿಕ ಭಾಗದಲ್ಲಿ ತೀವ್ರ ಚಂಡಮಾರುತಗಳಿಗೆ ಕನಿಷ್ಠ 63 ಜನರು ಸಾವನ್ನಪ್ಪಿದ್ದಾರೆ.