ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಒಳಗೊಂಡಿರುವ 20 ರೂಪಾಯಿ ಮುಖ ಬೆಲೆಯ ಹೊಸ ನೋಟು ಚಲಾವಣೆಗೆ ಬರಲಿದೆ ಎಂದು ಆರ್ ಬಿಐ ಹೇಳಿದೆ.
ಆರ್ ಬಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.
ಹಸಿರು ಮಿಶ್ರಿತ ಹಳದಿ ಬಣ್ಣದ 20 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಎಲ್ಲೋರಾ ಗುಹೆಯ ಚಿತ್ರವಿದೆ. ಇದು ದೇಶದ ಸಾಂಸ್ಕೃತಿಕ ಪರಂಪರೆ ಪ್ರತೀಕ ಎಂದು ಆರ್ ಬಿಐ ತಿಳಿಸಿದೆ.
ಹೊಸ ನೋಟಿನೊಂದಿಗೆ ಈಗೀರುವ 20 ರೂಪಾಯಿ ಮುಖಬೆಲೆಯ ಎಲ್ಲಾ ನೋಟುಗಳು ಕೂಡ ಚಲಾವಣೆಯಲ್ಲಿ ಇರಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
20ರ ಮುಖಬೆಲೆಯ ಹೊಸ ನೋಟುಗಳು ಭಿನ್ನ ವಿನ್ಯಾಸ ಹಾಗೂ ಗೆರೆಗಳನ್ನು ಹೊಂದಿದೆ. 63 ಮಿ.ಮೀ.X129 ಮಿ.ಮೀ ಅಳತೆಯಲ್ಲಿರಲಿದೆ.
ಬಲಭಾಗದಲ್ಲಿ ಅಶೋಕ ಕಂಬದ ಲಾಂಛನವಿದೆ ಮತ್ತು 20 ರೂ. ಎಂದು ಬರೆಯಲಾಗಿದೆ. ಮಧ್ಯಭಾಗದಲ್ಲಿ ಗಾಂಧಿ ಚಿತ್ರ, ಸಣ್ಣ ಅಕ್ಷರಗಳಲ್ಲಿ ಆರ್ ಬಿಐ, ಗವರ್ನರ್ ಸಹಿ ಹೀಗೆ ಹಲವು ಗುರುತುಗಳು ಇವೆ.