ಜಾರ್ಖಂಡ್: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿತ್ಯ 18 ಗಂಟೆ ಕೆಲಸ ಮಾಡಿದರೆ, ಕಾಂಗ್ರೆಸ್ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿ ಎರಡು ತಿಂಗಳಿಗೊಮ್ಮೆ ರಜೆಯನ್ನು ಪಡೆದು ಮಜಾ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.
ಅವರು ಶನಿವಾರ ಬಿಜೆಪಿ ಚುನಾವಣಾ ರಾಲಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಕಳೆದ 20ವರ್ಷದಿಂದ ನೋಡುತ್ತಿದ್ದೇನೆ. ಅವರು ಯಾವತ್ತೂ ರಜೆ ತೆಗೆದುಕೊಂಡವರಲ್ಲ. ಇನ್ನೊಂದು ಕಡೆ ಕಾಂಗ್ರೆಸ್ ರಾಷ್ಟ್ರಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿ ಎರಡು-ಮೂರು ತಿಂಗಳಿಗೊಮ್ಮೆ ರಜೆಯನ್ನು ಪಡೆದು ತಮ್ಮ ಪಕ್ಷ, ಕಾರ್ಯಕರ್ತರು ಹಾಗೂ ತಮ್ಮ ತಾಯಿಯನ್ನೇ ಮರೆತು ವಿದೇಶಕ್ಕೆ ಹೋಗಿ ಮಜಾ ಮಾಡುತ್ತಾರೆ ಎಂದು ಟೀಕೆ ಮಾಡಿದರು.
ಕಾಂಗ್ರೆಸ್ ತಮ್ಮ ಅಧಿಕಾರವಧಿಯಲ್ಲಿ ಪಾಕಿಸ್ತಾನಕ್ಕೆ ಯಾವುದೇ ಖಡಕ್ ಎಚ್ಚರಿಕೆಯನ್ನು ನೀಡಿಲ್ಲ. ಕಳೆದ ಹಲವು ವರ್ಷದ ಹಿಂದೆ ಯೋಧ ಹೇಮ್ ರಾಜ್ ಅವರನ್ನು ಪಾಕಿಸ್ತಾನ ಭೀಕರವಾಗಿ ಹತ್ಯೆ ಮಾಡಿದ್ದ ವೇಳೆಯೂ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಾಕಿಸ್ತಾನಕ್ಕೆ ಯಾವುದೇ ಉತ್ತರವನ್ನು ನೀಡಿಲ್ಲ. ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಎಂದಿನಂತೆ ಮೌನ ವಹಿಸಿದ್ದರು. ಇದನ್ನು ಈಗಲೂ ನೆನೆದರು ನೋವಾಗುತ್ತದೆ ಎಂದರು.