ಕಾಬೂಲ್ : ಅಫಘಾನಿಸ್ತಾನವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಂಡ ನಂತರ ಮೊದಲ ಬಾರಿಗೆ ವಿಮಾನವೊಂದು ಕಾಬೂಲ್ ಏರ್ಪೋರ್ಟ್ ನಿಂದ ಸುಮಾರು 70 ಪ್ರಯಾಣಿಕರನ್ನು ಹೊತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ಗೆ ಹಾರಿತು. ಆಗಸ್ಟ್ 15ರ ಬಳಿಕ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಕ್ಕೆ ಹೋದ ಮೊದಲ ನಾಗರಿಕ ವಿಮಾನ ಇದು.
ವಿಮಾನದಲ್ಲಿದ್ದ 70 ಪ್ರಯಾಣಿಕರ ಪೈಕಿ ಬಹುತೇಕರು ಅಫ್ಘನ್ನರು. ಅವರಲ್ಲಿ ಹಲವರು ವಿಶ್ವ ಬ್ಯಾಂಕ್, ಮತ್ತಿತರ ಸಂಸ್ಥೆಗಳ ಉದ್ಯೋಗಿಗಳ ಸಂಬಂಧಿಗಳು ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ತಿಳಿಸಿದ್ದಾರೆ.
ಪಾಕಿಸ್ತಾನದ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನವು ಸೋಮವಾರ ಕೆಲವೇ ಮಂದಿ ಪ್ರಯಾಣಿಕರೊಂದಿಗೆ ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಆದರೆ ಎಷ್ಟು ಅವಧಿಯ ಅಂತರದಲ್ಲಿ ಎರಡು ದೇಶಗಳ ರಾಜಧಾನಿಗಳ ಮಧ್ಯೆ ವಿಮಾನ ಓಡಾಡಲಿದೆ ಎಂದು ಹೇಳುವುದಕ್ಕೆ ಇದು ಸಮಯವಲ್ಲ ಎಂದು ಪಾಕಿಸ್ತಾನದ ವಿಮಾನ ಯಾನ ಸಂಸ್ಥೆಯೊಂದರ ವಕ್ತಾರರೊಬ್ಬರು ತಿಳಿಸಿದ್ದಾರೆ.