ಕಾಬೂಲ್ : ಭಾರತ ಬಯಸುವುದಾದರೆ ಅಫ್ಘಾನಿಸ್ತಾನ ನಲ್ಲಿ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
ಯಾರ ವಿರುದ್ಧವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ. ಭಾರತ ಬಯಸುವುದಾದರೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಯೋಜನೆಗಳು ಜನರ ಪರವಾಗಿದೆ ಎಂದು ವಕ್ತಾರ ಶಹೀನ್ ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ದುವಿನಲ್ಲಿ ಹೇಳಿದ್ದಾರೆ.
ಕಳೆದ ಸೋಮವಾರ ಅಫ್ಘಾನಿಸ್ತಾನವನ್ನು ತಾಲಿಬಾನೀಯರು ವಶಪಡಿಸಿಕೊಂಡ ನಂತರ ಭಾರತ ಬಗ್ಗೆ ನೀಡುತ್ತಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ.
ತಾಲಿಬಾನ್ ಉಗ್ರರೊಂದಿಗೆ ಮಾತುಕತೆ, ಸಂವಹನಕ್ಕೆ ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಸೂಚನೆ ನೀಡಿದ್ದರೂ ಕೂಡ ತಾಲಿಬಾನ್ ಒಂದು ಅಧಿಕೃತ ಸಂಘಟನೆಯಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ವೃತ್ತಿಪರರನ್ನು ಭಾರತ ಇತ್ತೀಚೆಗೆ ಹಿಂದಕ್ಕೆ ಕರೆಸಿಕೊಂಡಿತ್ತು.
ಈ ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಭಾರತ ಹೂಡಿಕೆ ಮಾಡಿರುವ ಮೊತ್ತ 3 ಬಿಲಿಯನ್ ಡಾಲರ್. ಶಟೂಟ್ ಅಣೆಕಟ್ಟು, ಸಲ್ಮಾ ಅಣೆಕಟ್ಟು, ಅಫ್ಘಾನಿಸ್ತಾನದ ಸಂಸತ್ತು ಮತ್ತು ಹಲವು ರಚನಾತ್ಮಕ ರಸ್ತೆಗಳ ನಿರ್ಮಾಣಕ್ಕೆ ಅಫ್ಘಾನಿಸ್ತಾನ ಭಾರತದ ನೆರವನ್ನು ಪಡೆದಿದೆ.
ಈ ಯೋಜನೆಗಳು ಮುಗಿದ ಬಳಿಕ ಇದರಲ್ಲಿ ಭಾರತದ ಪಾತ್ರವೇನೂ ಇರುವುದಿಲ್ಲ, ನಂತರ ಅದನ್ನು ಕಾಪಾಡಿಕೊಳ್ಳುವುದು ಅಫ್ಘಾನಿಸ್ತಾನಕ್ಕೆ ಬಿಟ್ಟ ವಿಚಾರ ಎಂದು ವಿದೇಶಾಂಗ ಸಚಿವಾಲಯ ಹೇಳಿತು.