ಕಾಬುಲ್: ಅಫ್ಘಾನಿಸ್ತಾನ ತಾಲಿಬಾಲಿಗಳ ಕೈ ವಶವಾಗಿದ್ದು, ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮಿರೂಲ್ಲಾಹ ಸಾಲೇಹ ದೇಶ ತೊರೆದಿದ್ದಾರೆ ಎಂದು ವರದಿಯಾಗಿದೆ.
ಅಶ್ರಫ್ ಗನಿ ಅಮೆರಿಕಾದತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದ್ದು, ಸಾಲೇಹ ಅವರ ನಡೆ ಬಗ್ಗೆ ತಿಳಿದು ಬಂದಿಲ್ಲ. ಈಗಾಗಲೇ ಅಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ವಶಕ್ಕೆ ಪಡೆದುಕೊಂಡಿರುವ ತಾಲಿಬಾನಿಗಳು ತಮ್ಮ ಧ್ವಜ ಹಾರಿಸಿದ್ದಾರೆ.
ತಾಲಿಬಾನಿಗಳು ಹೇಳುವಂತೆ ಈಗಾಗಲೇ ಅಲ್ಲಿಯ ಪೊಲೀಸರು ಶರಣಾಗಿದ್ದು, ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸುತ್ತಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದ ಮುಂದಿನ ಅಧ್ಯಕ್ಷ ಅಥವಾ ರಾಷ್ಟ್ರಪತಿ ಯಾರು ಅನ್ನೋ ಚರ್ಚೆಗಳು ಮುನ್ನಲೆಗೆ ಬಂದಿದ್ದು, ಮುಲ್ಲಾ ಬರಾದರ್ ಹೆಸರು ಕೇಳಿ ಬರುತ್ತಿದೆ.
ಸದ್ಯ ಈ ಮುಲ್ಲಾ ಬರದಾರ್ ಕತಾರ್ ನಲ್ಲಿದ್ದಾನೆ. ಕತಾರ್ ನಲ್ಲಿರುವ ತಾಲಿಬಾನ್ ಕಚೇರಿಯ ರಾಜಕೀಯ ಮುಖ್ಯಸ್ಥನಾಗಿರೋದರಿಂದ, ಮುಲ್ಲಾ ಬರಾದರ್ ಹೆಸರು ಸ್ಪರ್ಧೆಯಲ್ಲಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ಸಹ ಸ್ಥಾಪಕನಾಗಿದ್ದಾನೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗಿತ್ತು. ಭಾನುವಾರ ರಾತ್ರಿ ಸುಮಾರು 10 ಗಂಟೆಗೆ 129 ಪ್ರಯಾಣಿಕರಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಿದೆ. ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳು ತಮ್ಮ ದೇಶದ ಜನರನ್ನು ಏರ್ ಲಿಫ್ಟ್ ಮೂಲಕ ಕರೆಸಿಕೊಳ್ಳುತ್ತಿವೆ.