ಕಾಬೂಲ್: ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರರು ಅಲ್ಲಿನ ಜನರನ್ನು ಪ್ರಾಣಭಯವನ್ನು ಬಿತ್ತಿದ್ದಾರೆ. ಅಫ್ಘಾನ್ನಲ್ಲಿ ಇನ್ನು ಬದುಕಲು ಸಾಧ್ಯವೇ ಇಲ್ಲ ಎಂದು ಸಾವಿರಾರು ಜನರು ಬೇರೆ ದೇಶಗಳ ವಿಮಾನಗಳನ್ನು ಹತ್ತಿ ದೇಶ ಬಿಟ್ಟು ಹೋಗುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿನ್ನು ಶಾಂತಿ ನೆಲೆಸಲಿದೆ ಎಂಬ ಮಾತನ್ನಾಡಿದ್ದ ತಾಲಿಬಾನ್ ಉಗ್ರರು ಬಂದೂಕಿನಿಂದ ಸಾಲು ಸಾಲು ಹೆಣಗಳನ್ನು ಕೆಡವುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಮಹಿಳೆಯರು, ಯುವತಿಯರನ್ನು ತಾಲಿಬಾನಿಗರು ಲೈಂಗಿಕ ದಾಸರನ್ನಾಗಿ ಮಾಡಿಕೊಂಡಿದ್ದಾರೆ. ಇದೆಲ್ಲದರ ನಡುವೆ ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನಿಗರು ವಶಕ್ಕೆ ಪಡೆದ ವಿಜಯವನ್ನು ಸಂಭ್ರಮಿಸಲಾಗುತ್ತಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ನಲ್ಲಿರುವ ಮಹಿಳಾ ಮದರಸಾಗಳ ಮೇಲೆ ತಾಲಿಬಾನ್ ಬಾವುಟಗಳನ್ನು ಹಾರಿಸಲಾಗುತ್ತಿದೆ. ಸಲಾಂ ತಾಲಿಬಾನ್ ಎಂದು ಬುರ್ಖಾ ತೊಟ್ಟ ವಿದ್ಯಾರ್ಥಿನಿಯರು ಹಾಡುತ್ತಿರುವ ವಿಡಿಯೋಗಳು ಭಾರೀ ಚರ್ಚೆಗೆ ಕಾರಣವಾಗಿವೆ. ವೈರಲ್ ಆಗಿರುವ ವಿಡಿಯೋದಲ್ಲಿ ಬುರ್ಖಾ ತೊಟ್ಟ ಪಾಕಿಸ್ತಾನದ ವಿದ್ಯಾರ್ಥಿನಿಯರು ಸಲಾಂ ತಾಲಿಬಾನ್ ಎಂದು ಹಾಡುತ್ತಾ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ನಡೆಸಿದ ದಾಳಿಯನ್ನು ಸಂಭ್ರಮಿಸುತ್ತಿದ್ದಾರೆ. ಅವರ ಹಿಂದೆ ತಾಲಿಬಾನ್ ಬಾವುಟ ಇರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.