Bengaluru 23°C
Ad

ನಂದಿನಿ ಹೆಸರಲ್ಲಿ ರಾಜಕೀಯ : ಸರ್ಕಾರದ ವಿರುದ್ಧ ಕಿಡಿಕಾರಿದ ಆರ್. ಅಶೋಕ್

ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡದ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರು: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡದ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡು ಮತ್ತೊಂದು ಕಡೆ ಕೆಎಂಎಫ್‌ ಸಂಸ್ಥೆಯ ನಂದಿನಿ ಹಾಲು ಉತ್ಪಾದನೆಯಿಂದ ಬಂದ ಲಾಭದಲ್ಲಿ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವವನ್ನು ಪಡೆದುಕೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಆರ್.‌ ಅಶೋಕ್‌, ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗಾಗಲೇ ಸರ್ಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷಗಳು, ಈಗ ಮತ್ತಷ್ಟು ಸಮಸ್ಯೆಗಳನ್ನು ಹೊತ್ತು ಜನರ ಮುಂದಿಡಲು ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರಾಯೋಜಕತ್ವಕ್ಕೆ ಹಣ ಹಾಕಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ.

ಈ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ. ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆ ಸಂದರ್ಭದಲ್ಲಿ ನಂದಿನಿ ಹೆಸರಲ್ಲಿ ರಾಜಕೀಯ ಮಾಡಿ ಈಗ ಅಮೃತದಂತಹ ಹಾಲು ಕೊಡುವ ರೈತರ ಬಾಳಲ್ಲಿ ವಿಷ ಹಿಂಡುವ ಪಾಪದ ಕೆಲಸ ಮಾಡುತ್ತಿದ್ದೀರಲ್ಲ, ಇದೇನಾ ನೀವು ನಮ್ಮ ನಂದಿನಿ ಬ್ರ್ಯಾಂಡ್ ಉಳಿಸುವ ಪರಿ?

ನಂದಿನಿ ಸಂಸ್ಥೆಯ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವ ಪಡೆಯಲು ನಿಮ್ಮ ಸರ್ಕಾರದ ಬಳಿ ಇದೆ. ಆದರೆ, ನಂದಿನಿ ಬ್ರ್ಯಾಂಡ್ ಅನ್ನ ಕಟ್ಟಿ, ಬೆಳೆಸಿ, ಪೋಷಿಸುತ್ತಿರುವ ಹೈನುಗಾರರಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹ ಧನ ನೀಡಲು ತಮ್ಮ ಬಳಿ ಹಣವಿಲ್ಲ ಅಲ್ಲವೇ ಸಿದ್ದರಾಮಯ್ಯನವರೇ? ನಾಡಿನ ರೈತರ ಶಾಪ ತಮಗೆ ತಟ್ಟದೇ ಇರದು ಎಂದು ಆರ್.‌ ಅಶೋಕ್‌ ರೈತರ ಸಮಸ್ಯೆ ಹೇಳಿದ್ದಾರೆ.

Ad
Ad
Nk Channel Final 21 09 2023
Ad