ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನ.19ರಂದು ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ್ ವಿಮಾನ ವೈಮಾನಿಕ ಪ್ರದರ್ಶನ ನೀಡಲಿದೆ.
ಮೊಟೆರಾ ಪ್ರದೇಶದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯ ಪ್ರಾರಂಭವಾಗುವ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಹತ್ತು ನಿಮಿಷಗಳ ಕಾಲ ಜನರನ್ನು ಆಕರ್ಷಿಸಲಿದೆ. ಇಂದು ಮತ್ತು ಶನಿವಾರ ವೈಮಾನಿಕ ಪ್ರದರ್ಶನದ ತಾಲೀಮು ನಡೆಯಲಿದೆ ಎಂದು ಪಿಆರ್ಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ಈಗಾಗಲೇ ಏಕದಿನ ವಿಶ್ವಕಪ್ ಫೈನಲ್ ತಲುಪಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿರುವ ಆಸ್ಟ್ರೇಲಿಯಾ ಮತ್ತು ಭಾರತ ಫೈನಲ್ ಪಂದ್ಯವನ್ನು ಆಡಲಿವೆ.
ಇನ್ನು ಇಡೀ ಜಗತ್ತಿನಲ್ಲೇ ದೊಡ್ಡ ಕ್ರಿಕೆಟ್ ಮೈದಾನ ಎಂಬ ಬಿರುದು ಪಡೆದ, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯಕ್ಕೆ ತಯಾರಿ ಅಬ್ಬರದಿಂದ ನಡೆದಿದೆ. ಈಗಾಗಲೇ ಪಂದ್ಯ ವೀಕ್ಷಣೆಗಾಗಿ ಗಣ್ಯರ ಪಡೆಯನ್ನೇ ಕರೆಯಲಾಗಿದೆ. ಈ ಪೈಕಿ, ಭಾರತಕ್ಕೆ 2 ಬಾರಿ ವಿಶ್ವಕಪ್ ತಂದುಕೊಟ್ಟಿರುವ ಮಾಜಿ ಕ್ಯಾಪ್ಟನ್ಸ್ ಕೂಡ ಬರಲಿದ್ದಾರೆ. ಜೊತೆಗೆ, ಈಗ ದೇಶದ ಪ್ರಧಾನಿ ಮೋದಿ ಅವರಿಗೂ ವಿಶೇಷ ಆಹ್ವಾನ ನೀಡಲಾಗಿದೆಯಂತೆ.
ಇದೇ ಭಾನುವಾರ ಅಂದ್ರೆ ನವೆಂಬರ್ 19ರಂದು 2023ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಹೀಗಾಗಿ ಗಣ್ಯ ವ್ಯಕ್ತಿಗಳಿಗೂ ಈಗಾಗಲೇ ಆಹ್ವಾನ ನೀಡಲಾಗಿದೆ. ಅದರಂತೆ ಪ್ರಧಾನಿ ಮೋದಿ ಅವರನ್ನ ವಿಶೇಷವಾಗಿ ಆಹ್ವಾನಿಸಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಿಎಂ ಮೋದಿ ಅವ್ರು ನವೆಂಬರ್ 19ಕ್ಕೆ ಅಹಮದಾಬಾದ್ನ ‘ನರೇಂದ್ರ ಮೋದಿ’ ಕ್ರೀಡಾಂಗಣಕ್ಕೆ ಬಂದು, ಭಾರತ ತಂಡದ ಬೆನ್ನುತಟ್ಟುವ ಸಾಧ್ಯತೆ ದಟ್ಟವಾಗಿದೆ.