ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ರಿಷಭ್ ಕಮ್ಬ್ಯಾಕ್ಗೆ ವೇದಿಕೆ ಸಜ್ಜಾಗಿದೆ. ಶೀಘ್ರದಲ್ಲೇ ರಿಷಭ್ ಪುನರಾಗಮನ ಮಾಡಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ 31 ರಂದು ಪಂತ್ ಕಾರು ಅಪಘಾತಕ್ಕೆ ಒಳಗಾಗಿದ್ದರು. ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಈ ಕಾರಣದಿಂದ ಪಂತ್ ಸದ್ಯ ಸಾಗುತ್ತಿರುವ ವಿಶ್ವಕಪ್ನಲ್ಲಿ ಕೂಡ ಆಡುತ್ತಿಲ್ಲ. ಆದರೆ ಶೀಘ್ರದಲ್ಲೇ ರಿಷಭ್ ಪಂದ್ಯಕ್ಕೆ ಮರಳುವ ಬಗ್ಗೆ ಮಾಹಿತಿ ಸಿಕ್ಕಿದೆ.
ಇನ್ಸೈಡ್ ಸ್ಪೋರ್ಟ್ಸ್ ಮಾಡಿರುವ ವರದಿಯ ಪ್ರಕಾರ, ಪಂತ್ ಅವರು ದೇಶೀಯ ಕ್ರಿಕೆಟ್ ಮೂಲಕ ಕಮ್ಬ್ಯಾಕ್ ಮಾಡಲಿದ್ದಾರೆ. ನಂತರ ಅವರು ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ. ನವೆಂಬರ್ 23 ರಿಂದ ಡಿಸೆಂಬರ್ 16 ರವರೆಗೆ ನಡೆಯಲಿರುವ ಭಾರತದ ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂತ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.
ಪಂತ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ಮೂಲಕ ತಮ್ಮ ಲಯ ಕಂಡುಕೊಳ್ಳಲಿದ್ದಾರೆ. ನಂತರ ಅವರು ಮುಂದಿನ ವರ್ಷ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಸೇರಲಿದ್ದಾರಂತೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.