ಹೊಸದಿಲ್ಲಿ: ಕೇರಳದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್ನಲ್ಲಿ ಇಂದು ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯ ವೇಳೆ ನಡೆದ ಸರಣಿ ಸ್ಫೋಟಗಳ ನಂತರ, ರಾಷ್ಟ್ರ ರಾಜಧಾನಿ ಮತ್ತು ಮುಂಬೈನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಕೇರಳ ಸ್ಫೋಟದ ಹಿನ್ನೆಲೆಯಲ್ಲಿ ನಗರದ ಜನನಿಬಿಡ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅದೇ ರೀತಿ, ಮುಂಬೈ ಪೊಲೀಸರು ಮುಂಬರುವ ಹಬ್ಬಗಳು, ಕ್ರಿಕೆಟ್ ಪಂದ್ಯಗಳ ಕುರಿತು ಭಾರಿ ಮುಂಜಾಗ್ರತೆ ವಹಿಸಿದ್ದಾರೆ. ಇಸ್ರೇಲ್-ಹಮಾಸ್ ಯುದ್ಧ ನಡೆಯುತ್ತಿರುವ ಕಾರಣ ಮುಂಬೈನ ಯಹೂದಿ ಕೇಂದ್ರವಾದ ಚಾಬಾದ್ ಹೌಸ್ನಲ್ಲಿ ಈಗಾಗಲೇ ಭದ್ರತೆ ಹೆಚ್ಚಿಸಲಾಗಿದೆ. “ದೆಹಲಿ ಪೊಲೀಸರ ವಿಶೇಷ ಕೋಶವು ಗುಪ್ತಚರ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಜನನಿಬಿಡ ಸ್ಥಳಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.