ಹಾಸನ: ಜುಲೈ 12 ರಿಂದ 16 ರವರೆಗೆ ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿರುವ ಸುಪಾಚಲ್ಸೈ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 25 ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಥ್ಲಿಟ್ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಕ್ರೀಡಾಕೂಟದಲ್ಲಿ ಭಾರತ ಪರ 6 ಚಿನ್ನ, 12 ಬೆಳ್ಳಿ, 9 ಕಂಚಿನ ಪದಕಗಳಿಗೆ ಮುತ್ತಿಟ್ಟ ಅಥ್ಲಿಟ್ಗಳು ಪದಕಗಳ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ ತಂದುಕೊಟ್ಟಿದ್ದಾರೆ.
ಈ ವರ್ಷ ಜಪಾನ್ 16 ಚಿನ್ನ, 11 ಬೆಳ್ಳಿ ಮತ್ತು 10 ಕಂಚಿನ ಪದಕ ಸೇರಿದಂತೆ ಒಟ್ಟು 37 ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡರೆ, ಚೀನಾ 8 ಚಿನ್ನ, 8 ಬೆಳ್ಳಿ ಮತ್ತು 6 ಕಂಚು ಸೇರಿದಂತೆ ಒಟ್ಟು 22 ಪದಕಗಳನ್ನು ಗೆದ್ದು 2ನೇ ಸ್ಥಾನ ಪಡೆದುಕೊಂಡಿತು.
ಇನ್ನು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಹಾಸನದ ಹೆಮ್ಮೆಯ ಕುವರ ಡಿಪಿ ಮನು ಜಾವೆಲಿನ್ ಥ್ರೋ ವಿಭಾಗದಲ್ಲಿ 81.01 ಮೀ ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಒಲಂಪಿಕ್ಸ್ ಹೀರೋ ನೀರಜ್ ಚೋಪ್ರಾ ಅವರು ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಶಿಪ್ಗಾಗಿ ತಯಾರಿ ನಡೆಸುತ್ತಿರುವ ಕಾರಣ ಈ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದರು. ಹೀಗಾಗಿ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಮನು ಕೇವಲ 2 ಮೀಟರ್ ಅಂತರದಿಂದ ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು.