News Karnataka Kannada
Saturday, April 27 2024
ಕ್ರೀಡೆ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌, ಮೊದಲ ದಿನವೇ ಭಾರತ ತಂಡಕ್ಕೆ ತುಸು ಹಿನ್ನಡೆ

Brand Mangalore Friendly Cricket Tournament to be held on Oct 1
Photo Credit :

ಜೋಹಾನ್ಸ್‌ಬರ್ಗ್(ಜ.04)‌ : ಮಧ್ಯಮ ಕ್ರಮಾಂಕದ ದಯನೀಯ ವೈಫಲ್ಯದ ಪರಿಣಾಮ, ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 202 ರನ್‌ಗೆ ಆಲೌಟ್‌ ಆಗಿ, ಮೊದಲ ದಿನವೇ ತುಸು ಹಿನ್ನಡೆ ಕಂಡಿದೆ. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ದಕ್ಷಿಣ ಆಫ್ರಿಕಾ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 35 ರನ್‌ ಗಳಿಸಿದ್ದು, ಇನ್ನೂ 167 ರನ್‌ ಹಿನ್ನಡೆಯಲ್ಲಿದೆ.

ವಿರಾಟ್‌ ಕೊಹ್ಲಿ ಅಲಭ್ಯರಾದ ಕಾರಣ ಕೆ.ಎಲ್‌.ರಾಹುಲ್‌  ಭಾರತ ತಂಡದ ನಾಯಕರಾಗಿ ಕಣಕ್ಕಿಳಿದರು. ಟಾಸ್‌ ಗೆದ್ದ ರಾಹುಲ್‌ ತಮ್ಮ ತಂಡ ಮೊದಲು ಬ್ಯಾಟ್‌ ಮಾಡುವುದಾಗಿ ತಿಳಿಸಿದರು. ಕೊಹ್ಲಿ ಬದಲಿಗೆ ಹನುಮ ವಿಹಾರಿಗೆ ಸ್ಥಾನ ನೀಡಲಾಯಿತು.

ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್‌ ದಾಳಿ ಎದುರು ಭಾರತ 63.1 ಓವರಲ್ಲಿ ಆಲೌಟ್‌ ಆಯಿತು. ಬಳಿಕ 18 ಓವರ್‌ ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ಭಾರತದ ತ್ರಿವಳಿ ವೇಗಿಗಳ ಮಾರಕ ದಾಳಿಯ ಎದುರು ಎದೆಯೊಡ್ಡಿ ನಿಂತು, ಕೇವಲ 1 ವಿಕೆಟ್‌ ಕಳೆದುಕೊಂಡಿತು. ಸತತ 3ನೇ ಇನ್ನಿಂಗ್ಸ್‌ನಲ್ಲಿ ಏಡನ್‌ ಮಾರ್ಕ್ರಮ್‌(07) ಮೊಹಮದ್‌ ಶಮಿಗೆ ಔಟಾದರು. ನಾಯಕ ಡೀನ್‌ ಎಲ್ಗರ್‌ ಹಾಗೂ ಕೀಗನ್‌ ಪೀಟರ್‌ಸನ್‌ 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಈ ಪಿಚ್‌ನಲ್ಲಿ 202 ರನ್‌ ತೀರಾ ಕಡಿಮೆ ಮೊತ್ತ ಎಂದೇನೂ ಅನಿಸುತ್ತಿಲ್ಲ. ಭಾರತೀಯ ವೇಗಿಗಳು ಮಂಗಳವಾರ ಮೊದಲ ಅವಧಿಯಲ್ಲಿ ಶಿಸ್ತುಬದ್ಧ ದಾಳಿ ಸಂಘಟಿಸಿದರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುವುದು ಕಷ್ಟವೇನಲ್ಲ ಎನಿಸಿದೆ. ದಿನದಾಟದ ಕೊನೆಯಲ್ಲಿ ಸ್ನಾಯು ಸೆಳತಕ್ಕೆ ಒಳಗಾದ ಮೊಹಮದ್‌ ಸಿರಾಜ್‌, 2ನೇ ದಿನ ಬೌಲಿಂಗ್‌ಗಿಳಿಯದಿದ್ದರೆ ಭಾರತಕ್ಕೆ ಹಿನ್ನಡೆಯಾಗಬಹುದು.

ರಾಹುಲ್‌, ಅಶ್ವಿನ್‌ ಹೋರಾಟ: ಮೊದಲ ವಿಕೆಟ್‌ಗೆ ರಾಹುಲ್‌ ಜೊತೆ 36 ರನ್‌ ಸೇರಿಸಿದ ಮಯಾಂಕ್‌ ಅಗರ್‌ವಾಲ್‌, 21 ವರ್ಷದ ವೇಗಿ ಮಾರ್ಕೊ ಜಾನ್ಸೆನ್‌ಗೆ ಮೊದಲ ಬಲಿಯಾದರು. ಲಯದ ಸಮಸ್ಯೆ ಮುಂದುವರಿಸಿರುವ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆಯನ್ನು ಸತತ 2 ಎಸೆತಗಳಲ್ಲಿ ಡುವಾನೆ ಓಲಿವರ್‌ ಪೆವಿಲಿಯನ್‌ಗಟ್ಟಿದರು. 49 ರನ್‌ಗೆ ಭಾರತ 3 ವಿಕೆಟ್‌ ಕಳೆದುಕೊಂಡಿತು.

ಬಳಿಕ ರಾಹುಲ್‌ ಹಾಗೂ ಹನುಮ ವಿಹಾರಿ 42 ರನ್‌ ಜೊತೆಯಾಟದಲ್ಲಿ ಭಾಗಿಯಾದರು. ತಂಡ ಚೇತರಿಕೆ ಕಾಣುತ್ತಿದೆ ಎನ್ನುವಷ್ಟರಲ್ಲಿ ವ್ಯಾನ್‌ ಡೆರ್‌ ಡುಸ್ಸೆನ್‌ ಹಿಡಿದ ಅದ್ಭುತ ಕ್ಯಾಚ್‌ ವಿಹಾರಿ ಇನ್ನಿಂಗ್ಸ್‌ ಮುಕ್ತಾಯಗೊಳಿಸಿತು. ಅರ್ಧಶತಕದ ಬಳಿಕ ರಾಹುಲ್‌(50) ದುಬಾರಿ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. ರಾಹುಲ್‌ರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳಿದ್ದವು.

ರಿಷಭ್ ಪಂತ್‌ ನಿರೀಕ್ಷಿತ ಇನ್ನಿಂಗ್ಸ್‌ ಕಟ್ಟಲಿಲ್ಲ. ಆದರೆ ಆರ್‌.ಅಶ್ವಿನ್‌ 50 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 46 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ರಬಾಡ ಅವರ ಒಂದೇ ಓವರಲ್ಲಿ 14 ರನ್‌ ಚಚ್ಚಿದ ಬುಮ್ರಾ, ತಂಡದ ಮೊತ್ತ 200 ರನ್‌ ದಾಟಲು ನೆರವಾದರು. ಜಾನ್ಸೆನ್‌ 4, ರಬಾಡ ಹಾಗೂ ಓಲಿವರ್‌ ತಲಾ 3 ವಿಕೆಟ್‌ ಕಿತ್ತರು.

ಕೊಹ್ಲಿಯ 100ನೇ ಟೆಸ್ಟ್‌ಗೆ ಬೆಂಗಳೂರು ಆತಿಥ್ಯ?

98 ಟೆಸ್ಟ್‌ ಆಡಿರುವ ಕೊಹ್ಲಿ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲೇ 100 ಟೆಸ್ಟ್‌ಗಳ ಮೈಲಿಗಲ್ಲು ತಲುಪುವ ನಿರೀಕ್ಷೆಯಿತ್ತು. ಆದರೆ ಇದು ಈಡೇರುವುದಿಲ್ಲ. ಮುಂದಿನ ಟೆಸ್ಟ್‌ನಲ್ಲಿ ಕೊಹ್ಲಿ ಆಡಿದರೆ 99 ಟೆಸ್ಟ್‌ಗಳನ್ನು ಪೂರೈಸಲಿದ್ದು, ಅವರ 100ನೇ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಫೆಬ್ರವರಿ 25ರಿಂದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌, ಬೆಂಗಳೂರಲ್ಲಿ ನಡೆಯಲಿದೆ.

ಭಾರತ ಟೆಸ್ಟ್‌ ಟೀಂ ನಾಯಕನಾದ 4ನೇ ಕನ್ನಡಿಗ ಕೆ.ಎಲ್‌.ರಾಹುಲ್‌

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಒಟ್ಟಾರೆ 34ನೇ ಆಟಗಾರ ಎನಿಸಿರುವ ಕೆ.ಎಲ್‌.ರಾಹುಲ್‌, ಈ ಅವಕಾಶ ಪಡೆದ ಕರ್ನಾಟಕದ 4ನೇ ಕ್ರಿಕೆಟಿಗ. ಈ ಮೊದಲು 1980ರಲ್ಲಿ ಜಿ.ಆರ್‌.ವಿಶ್ವನಾಥ್‌ 2 ಟೆಸ್ಟ್‌ಗಳಲ್ಲಿ ತಂಡ ಮುನ್ನಡೆಸಿದರೆ, 2003ರಿಂದ 2007ರ ವರೆಗೂ ರಾಹುಲ್‌ ದ್ರಾವಿಡ್‌  25 ಪಂದ್ಯಗಳಲ್ಲಿ ನಾಯಕರಾಗಿದ್ದರು. 2007ರಿಂದ 2008ರ ವರೆಗೂ 14 ಟೆಸ್ಟ್‌ಗಳಲ್ಲಿ ಅನಿಲ್‌ ಕುಂಬ್ಳೆ ನಾಯಕರಾಗಿ ಕಾರ‍್ಯನಿರ್ವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು