ಲಂಡನ್: ಇಂದು ಆರಂಭಗೊಳ್ಳುವ ನಾಲ್ಕನೇ ಟೆಸ್ಟ್ ಪಂದ್ಯಾಟದಲ್ಲಿ ಭಾರತ ತಂಡವು ಜಯಿಸಲೇಬೇಕಾದ ಒತ್ತಡದಲ್ಲಿದೆ. ಈ ಹಿನ್ನೆಲೆ ಹೊಸ ಬದಲಾವಣೆಯೊಂದಿಗೆ ಕೊಹ್ಲಿ ಬಳಗ ಕಣಕ್ಕಿಳಿಯಲಿದೆ.
ಲಾರ್ಡ್ಸ್ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ನಲ್ಲಿ ಅಮೋಘ ಜಯ ಸಾಧಿಸಿದ್ದ ಭಾರತ ತಂಡವು ನಂತರ ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್ನಲ್ಲಿ ಸೋಲಿನ ಆಘಾತ ಎದುರಿಸಿತ್ತು. ಅದರಿಂದಾಗಿ ಸರಣಿಯು 1–1ರಿಂದ ಸಮಸ್ಥಿತಿಯಲ್ಲಿದೆ. ಇನ್ನೆರಡು ಪಂದ್ಯಗಳು ಬಾಕಿ ಇವೆ.
ಹೆಡಿಂಗ್ಲೆ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವಿರಾಟ್ ಬಳಗವು 78 ರನ್ಗಳಿಸಿ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದ್ದರು. ಚೇತೇಶ್ವರ್ ಪೂಜಾರ ಶತಕದಂಚಿನಲ್ಲಿ ಎಡವಿದ್ದರೂ ಲಯಕ್ಕೆ ಮರಳಿದ್ದು ಸಮಾಧಾನದ ಸಂಗತಿ. ವಿರಾಟ್ ಕೂಡ ಅರ್ಧಶತಕ ಗಳಿಸಿದ್ದರು.