Bengaluru 25°C
Ad

ಸ್ಯಾಮ್‌ಸಂಗ್ : ಡಿಸೈನ್ ಥಿಂಕಿಂಗ್ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳು ಗೆಲ್ಲಬಹುದು ₹25 ಲಕ್ಷ

ಸ್ಯಾಮ್‌ಸಂಗ್ ದೇಶದಾದ್ಯಂತ 2000 ಶಾಲಾ ವಿದ್ಯಾರ್ಥಿಗಳಿಗಾಗಿ 'ಡಿಸೈನ್ ಥಿಂಕಿಂಗ್ ಸ್ಫರ್ಧೆ ಹಾಗೂ ತರಬೇತಿ' ಕಾರ್ಯಾಗಾರವನ್ನು ಆಯೋಜಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.

ಬೆಂಗಳೂರು: ಸ್ಯಾಮ್‌ಸಂಗ್ ದೇಶದಾದ್ಯಂತ 2000 ಶಾಲಾ ವಿದ್ಯಾರ್ಥಿಗಳಿಗಾಗಿ ‘ಡಿಸೈನ್ ಥಿಂಕಿಂಗ್ ಸ್ಫರ್ಧೆ ಹಾಗೂ ತರಬೇತಿ’ ಕಾರ್ಯಾಗಾರವನ್ನು ಆಯೋಜಿಸಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ.

ಸ್ಯಾಮ್‌ಸಂಗ್‌ನ ‘ಸಾಲ್ವ್ ಫಾರ್ ಟುಮಾರೋ’ ಕಾರ್ಯಕ್ರಮದ ಭಾಗವಾಗಿರುವ ಈ ತರಬೇತಿ ಕಾರ್ಯಾಗಾರವು ಈ ಕಾಲಘಟ್ಟದಲ್ಲಿ ಮಾನವ ಕೇಂದ್ರಿತ ತಂತ್ರಜ್ಞಾನದಲ್ಲಿ ಅತ್ಯಗತ್ಯವಿರುವ ಸಮಸ್ಯೆ-ಪರಿಹಾರ, ವಿಮರ್ಶಾತ್ಮಕ ಯೋಚನೆಗಳು,

ತನಿಖೆ ಮತ್ತು ಸೃಜನಶೀಲತೆಯ ಕೌಶಲ್ಯಗಳನ್ನು ವಿದ್ಯಾರ್ಥಿ ಸಮುದಾಯದಲ್ಲಿ ವರ್ಧಿಸುವ ಗುರಿಯನ್ನು ಹೊಂದಿದೆ. ಮುಂದಿನ ಪೀಳಿಗೆಯಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ.

ಭಾರತಕ್ಕಾಗಿಯೇ ರೂಪಿಸಿರುವ ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ‘ಡಿಸೈನ್ ಥಿಂಕಿಂಗ್’ ಪರಿಕಲ್ಪನೆಯನ್ನು ತಿಳಿದುಕೊಂಡು, ವಾಸ್ತವಿಕ ಜಗತ್ತಿನ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ಬಗೆಗೆ ಅವರನ್ನು ತಯಾರುಗೊಳಿಸಲಾಗುತ್ತದೆ.

ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಪರಿಕರಗಳನ್ನು ಹಾಗೂ ಪ್ರಕ್ರಿಯೆಗಳನ್ನು ತಿಳಿದುಕೊಂಡು ಮತ್ತು ಅದರ ಅಧಾರದಲ್ಲಿ ಬಳಕೆದಾರರ ಬೇಡಿಕೆಗಳಿಗೆ ತಕ್ಕಂತೆ ಪರಿಹಾರಗಳನ್ನು ಕಂಡು ಹುಡುಕುವ ವಿಧಾನವಿದು.

10 ಶಾಲೆಗಳಲ್ಲಿ ಪೈಲಟ್ ಯೋಜನೆಯಾಗಿ ಡಿಸೈನ್ ಥಿಂಕಿಂಗ್ ಕಾರ್ಯಾಗಾರಗಳನ್ನು ನಡೆಸಿ, ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಮಸ್ಯೆ-ಪರಿಹಾರ, ಸಹಯೋಗ ಮತ್ತು ಸೃಜನಶೀಲ ಆಲೋಚನೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಗಿದೆ ಎಂದು ಸ್ಯಾಮ್‌ಸಂಗ್ ನೈರುತ್ಯ ಏಷ್ಯಾ ವಿಭಾಗದ ಕಾರ್ಪೊರೇಟ್ ಉಪಾಧ್ಯಕ್ಷ ಎಸ್.ಪಿ.ಚುನ್ ಹೇಳಿದ್ದಾರೆ.

ಸ್ಯಾಮ್‌ಸಂಗ್‌ನ ‘ಸಾಲ್ವ್ ಫಾರ್ ಟುಮಾರೋ’ ಯೋಜನೆಯ ಅಡಿಯಲ್ಲಿ ನಡೆಸಲಾಗುವ ಒಂದು ದಿನದ ಕಾರ್ಯಾಗಾರದಲ್ಲಿ ಡಿಸೈನ್ ಥಿಂಕಿಂಗ್‌ನ ಪರಿಕಲ್ಪನೆ, ಅದರಲ್ಲಿರುವ ಹಂತಗಳನ್ನು ಕಲಿಸುವ ಮೂಲಕ ಸೃಜನಶೀಲತೆಯನ್ನು ಉತ್ತೇಜಿಸಲಾಗುತ್ತದೆ.

14ರಿಂದ 17 ವಯಸ್ಸಿನೊಳಗಿನವರು ಒಬ್ಬರು ಅಥವಾ ಗರಿಷ್ಠ ಐದು ಮಂದಿಯ ತಂಡಗಳಾಗಿ ‘ಸಮುದಾಯ ಮತ್ತು ಒಳಗೊಳ್ಳುವಿಕೆ’ ಥೀಮ್ ಅಡಿಯಲ್ಲಿ, ಸೌಲಭ್ಯವಂಚಿತರಿಗೆ ಆರೋಗ್ಯ ಸೇವೆಗಳ ಲಭ್ಯತೆ ಸುಲಭವಾಗಿಸುವ, ಕಲಿಕಾ ವಿಧಾನಗಳ ಸುಧಾರಣೆ, ಶಿಕ್ಷಣದ ಲಭ್ಯತೆ ಮತ್ತು ಎಲ್ಲರಿಗೂ ಸಾಮಾಜಿಕ ಒಳಗೊಳ್ಳುವಿಕೆಯ ಸಾಧ್ಯತೆಯ ಕುರಿತಾಗಿ ತಮ್ಮ ಆಲೋಚನೆಗಳನ್ನು ಸಲ್ಲಿಸಬಹುದಾಗಿದೆ.

ಈ ಸ್ಫರ್ಧೆಯ ಸೆಮಿಫೈನಲ್ ತಲುಪುವ 10 ತಂಡಗಳಿಗೆ ಪ್ರೋಟೊಟೈಪ್ ಅಭಿವೃದ್ಧಿಗಾಗಿ ತಲಾ ₹20,000 ಅನುದಾನ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ಗಳನ್ನು ನೀಡಲಾಗುತ್ತದೆ. ಅಂತಿಮ ಸುತ್ತಿಗೆ ಪ್ರವೇಶಿಸುವ ಐದು ತಂಡಗಳಿಗೆ ತಲಾ ಪ್ರೋಟೊಟೈಪ್ ಅಭಿವೃದ್ಧಿಗಾಗಿ ₹1 ಲಕ್ಷ ಅನುದಾನ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್‌ಗಳನ್ನು ಒದಗಿಸಲಾಗುತ್ತದೆ.

ವಿಜೇತ ವ್ಯಕ್ತಿ ಅಥವಾ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024 ಯೋಜನೆಯ ‘ಸಮುದಾಯ ಚಾಂಪಿಯನ್’ ಎಂದು ಘೋಷಿಸಲಾಗುತ್ತದೆ ಮತ್ತು ಪ್ರೋಟೊಟೈಪ್ ಸುಧಾರಣೆಗಾಗಿ ₹25 ಲಕ್ಷ ಅನುದಾನ ದೊರೆಯುತ್ತದೆ. ಸಮಸ್ಯೆ ಪರಿಹಾರದ ಮನಸ್ಥಿತಿಯನ್ನು ಪ್ರೋತ್ಸಾಹಿಸುವ ಶೈಕ್ಷಣಿಕ ವಿಚಾರಗಳನ್ನು ಉತ್ತೇಜಿಸಲು ವಿಜೇತ ತಂಡದ ಶಾಲೆಗಳಿಗೂ ಸ್ಯಾಮ್‌ಸಂಗ್ ಉತ್ಪನ್ನಗಳನ್ನು ನೀಡಲಾಗುತ್ತದೆ.

Ad
Ad
Nk Channel Final 21 09 2023
Ad