ವಿಜಯಪುರ: ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಮೂಲಗಳಲ್ಲಿ ಕೊಳಚೆ ನೀರು ಸೇರದಂತೆ ಕಡ್ಡಾಯವಾಗಿ ಮುನ್ನೆಚ್ಚರಿಕೆ ವಹಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಮಾನ್ಸೂನ್ ಪೂರ್ವ ಸಿದ್ಧತೆ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿದಿನವೂ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡಬೇಕು. ನಗರ ಪ್ರದೇಶಗಳಲ್ಲಿ ಯುಜಿಡಿ ಹಾಗೂ ಚರಂಡಿಯ ಕೊಳಚೆ ನೀರು, ಕುಡಿಯುವ ಪೈಪ್‌ಲೈನ್ ಹಾದುಹೋದ ಕಡೆ ಬಹು ಎಚ್ಚರಿಕೆಯಿಂದ, ಕಾಮಗಾರಿ ನಡೆಯುವಾಗ ಪೈಪ್‌ಲೈನ್ ಒಡೆದು ಹೊಗದಂತೆ ಗಮನಿಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಜೊತೆ ಕೊಳಚೆ ನೀರು ಸೇರಿ ಕಲುಷಿತವಾಗದಂತೆ ನೋಡಿಕೊಳ್ಳಿ , ಒಂದು ವೇಳೆ ಇದರಲ್ಲಿ ವಿಫಲವಾದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಏನಾದರೂ ಸಮಸ್ಯಗಳು ಕಂಡು ಬಂದರೆ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು,
ಶಾಲೆ ಅಂಗನವಾಡಿಗಳಲ್ಲಿ ಶುದ್ಧ ಕುಡಿಯುವ ನೀರಿಗೆ ಆಧ್ಯತೆ ನೀಡಿ: ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ವಸತಿನಿಲಯಗಳಲ್ಲಿ ಕಾಲಕಾಲಕ್ಕೆ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು. ಅಡುಗೆಗೆ ಶುದ್ಧ ನೀರು ಪೂರೈಸುವ ಕಾರ್ಯವನ್ನು ಜವಾಬ್ದಾರಿಯುತವಾಗಿ ಮಾಡಬೇಕು. ಯಾವ ಶಾಲೆ, ಅಂಗನವಾಡಿ ಹಾಗೂ ವಸತಿನಿಲಯಗಳಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ತಿಳಿದುಕೊಂಡು ಅದನ್ನು ಬಗೆಹರಿಸುವ ಕೆಲಸ ಮಾಡಬೇಕು.
ಜಿಲ್ಲೆಯಲ್ಲಿ ಬತ್ತಿಹೋದ ಕೊಳವೆಬಾವಿಗಳ ಮಾಹಿತಿಯನ್ನು ಪಡೆದುಕೊಂಡು ಸ್ಥಳೀಯ ಸಂಸ್ಥೆಗಳ ಮೂಲಕ ಅಂತರ್ಜಲ ಮರುಪೂರಣ ಮಾಡುವ ಕಾರ್ಯವನ್ನು ಮಾಡಬೇಕು. ಜಲಜೀವನ್ ಮಿಷನ್ ಅಡಿಯಲ್ಲಿ ಶಾಲೆ, ಅಂಗನವಾಡಿ, ಹಾಸ್ಟೇಲ್ ಗಳಿಗೆ ಕುಡಿಯುವ ನೀರಿನ ಸಂಪರ್ಕ ಮಾಡಬೇಕು ಎಂದು ಸೂಚಿಸಿದರು.
ಮಾನ್ಸೂನ್ ಪೂರ್ವ ತಯಾರಿ : ಎಲ್ಲಿಯೂ ಮಳೆಯ ನೀರು ನಿಲ್ಲದಂತೆ ಚರಂಡಿಗಳನ್ನು ಸ್ವಚ್ಚತೆ ಮಾಡಬೇಕು. ನಗರ ಹಾಗೂ ಹಳ್ಳಿಗಳಲ್ಲಿ ಫಾಗಿಂಗ್ ಮಾಡಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಂಡು ಕಾಲಾರ, ಮಲೇರಿಯಾದಂತಹ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ನದಿದಂಡೆಯಲ್ಲಿರುವ ಜಿಲ್ಲೆಯ 118 ಗ್ರಾಮಗಳಲ್ಲಿ ಪ್ರವಾಹದಂತಹ ಪರಿಸ್ಥಿತಿಯನ್ನು ಎದುರಿಸಲು ವಿಫತ್ತು ನಿರ್ವಹಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿದ್ಧರಾಗಬೇಕು. ನುರಿತ ಈಜುಗಾರರು, ಹಗ್ಗ, ಏಣಿ, ದೋಣಿಗಳು, ಹಾಗೂ ವಿವಿಧ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಅಗ್ನಿಶಾಮಕದ ದಳ, ಪೊಲೀಸ್ ಸಿಬ್ಬಂದಿ, ರಕ್ಷಣಾ ಪಡೆಗಳು, ಹಾಗೂ ಸ್ಥಳೀಯ ಅಧಿಕಾರಿ ಸಿಬ್ಬಂದಿಗಳ ಹೆಸರು, ಸಂಪರ್ಕ ಸಂಖ್ಯೆಗಳ ಮಾಹಿತಿಯನ್ನು ನವೀಕರಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಋಷಿ ಆನಂದ ಸೇರಿದಂತೆ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.