News Karnataka Kannada
Wednesday, May 08 2024
ಮೈಸೂರು

ಮೈಸೂರಿನಲ್ಲಿ ಯುವ ದಸರಾಗೆ ಸಂಭ್ರಮದ ಚಾಲನೆ

Yuva Dasara celebrations begin in Mysuru
Photo Credit : News Kannada

ಮೈಸೂರು: ಮಹಾರಾಜ ಕಾಲೇಜು ಮೈದಾನದ ವರ್ಣರಂಜಿತ ವೇದಿಕೆಯಲ್ಲಿ, ಸಹಸ್ರಾರು ಯುವಕ, ಯುವತಿಯರ ಶಿಳ್ಳೆ, ಚಪ್ಪಾಳೆ, ಘೋಷಣೆಗಳ ನಡುವೆ ನಟ ಶಿವರಾಜಕುಮಾರ್ ಯುವ ದಸರಾಗೆ ಚಾಲನೆ ನೀಡಿದರು.

ಬಹುನಿರೀಕ್ಷಿತ ಕಾರ್ಯಕ್ರಮವಾದ ಯುವದಸರಾಕ್ಕೆ ನಟ ಶಿವರಾಜಕುಮಾರ್ ವೇದಿಕೆ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸುತ್ತಿದ್ದಂತೆ ಮೈದಾನದ ತುಂಬೆಲ್ಲಾ ಶಿಳ್ಳೆ, ಘೋಷಣೆ ಮೊಳಗಿತು.

ಈ ವೇಳೆ ಮಾತನಾಡಿದ ಶಿವರಾಜಕುಮಾರ್, ನಾನು ಎರಡನೇ ಬಾರಿಗೆ ಯುವ ದಸರಾದಲ್ಲಿ ಭಾಗವಹಿಸುತ್ತಿದ್ದೇನೆ. ಸರ್ಕಾರ ಸರಳವಾಗಿ ದಸರಾ ಆಚರಣೆ ಮಾಡುತ್ತಿದ್ದರು ಹೆಚ್ಚು ಖುಷಿ ಪಡಿ. ಜೀವನದಲ್ಲಿ ಖುಷಿ ಇರಬೇಕು. ಓದುವ ಸಮಯದಲ್ಲಿ ಓದಬೇಕು. ಖುಷಿ ಪಡುವ ಸಮಯದಲ್ಲಿ ಖುಷಿಯಾಗಿರಿ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಪ್ರಾಮಾಣಿಕವಾಗಿದ್ದರೆ ಸಾಧನೆ ಸಾಧ್ಯ ಎಂದರು.

ಬಳಿಕ ತಮ್ಮ ಘೋಸ್ಟ್ ಚಿತ್ರದ ಡೈಲಾಗ್ ಹೇಳಿದರಲ್ಲದೆ, ಆಕಾಶವೆ ಬೀಳಲಿ ಮೇಲೆ ನಾ ನಿನ್ನ ಕೈಬಿಡೆನು, ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹಕ್ಕಿಯಾ ನೋಡಿದೆ ಹಾಡು ಹಾಡಿ ರಂಜಿಸಿದರು.

ಗಾಯನ ಮೋಡಿ: ಸರಿಗಮಪ ರನ್ನರ್ ಅಪ್ ಐಶ್ವರ್ಯ ರಂಗರಾಜ್ ತಮ್ಮ ಗಾಯನದ ಮೂಲಕ ಮೋಡಿ ಮಾಡಿದರು. ಏಕ್ ಲವ್ ಯಾ ಚಿತ್ರದ ಮೀಟ್ ಮಾಡಣ ಇಲ್ಲ ಡೇಟ್ ಮಾಡಣ ಹಾಡನ್ನು ಹಾಡುವ ಮೂಲಕ ಯುವ ಮನಗಳಿಗೆ ಕಿಚ್ಚು ಹಚ್ಚಿದರು. ಗಾಯಕಿ ವೇದಿಕೆ ಮೇಲೆ ಹಾಡುತ್ತಿದ್ದರೆ ಮುಂದೆ ನೆರೆದಿದ್ದ ಸಾವಿರಾರು ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.

ಕನ್ನಡ ಕೋಗಿಲೆ ಸೀಸನ್-5ರ ದಿವ್ಯಾ ರಾಮಚಂದ್ರ, ಜೋಕೆ ನಾನು ಬಳ್ಳಿಯ ಮಿಂಚು, ಸುತ್ತ ಮುತ್ತಲು ಸಂಜೆಗತ್ತಲು ಮೆತ್ತ ಮೆತ್ತಗೆ ಮೈಯ್ಯ ಮುಟ್ಟಲು, ರಸಿಕಾ, ರಸಿಕಾ ಬಲು ಮೆಲ್ಲನೆ ತೂರಾಡು ಹಾಡಿನ ಮೂಲಕ ನೀರಸವಾಗಿದ್ದ ಯುವ ದಸರಾಗೆ ಜೋಶ್ ತಂದರು.

ಬಳಿಕ ಗಾಯಕ ವ್ಯಾಸರಾಜ್ ಸೋಸಲೆ ತಮ್ಮ ಕಂಚಿನ‌ ಕಂಠದಲ್ಲಿ ಚಕ್ರವರ್ತಿ ಚಿತ್ರದ ನೋಡೋ ಕತ್ತು ಎತ್ತಿ ಬಂದ ಚಕ್ರವರ್ತಿ ಹಾಡನ್ನು ಹಾಡಿ ಯುವಕರು ಶಿಳ್ಳೆ ಹಾಕುತ್ತ ಕುಣಿದು ಕುಪ್ಪಳಿಸುವಂತೆ ಮಾಡಿದರಲ್ಲದೆ ಅವರಿಂದಲೂ ಹಾಡಿಸಿದರು.

ನಟಿ ರಾಧಿಕಾ ನಾರಾಯಣ್ ಜಿಲ್ ತಾ ಜಿಲ್ ತಾ ರೇ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದರು. ಬಿಗ್ ಬಾಸ್ ಖ್ಯಾತಿಯ ಕಿಶನ್ ಬೆಳಗಲಿ ಕಾಂತಾರ ಚಿತ್ರದ ಸಿಂಗಾರ ಸಿರಿಯೇ, ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರದ ದಿಮಾಕು ಬಿಟ್ಟಾಕು, ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ, ದರ್ಶನ್ ನಟನೆಯ ರಾಬರ್ಟ್ ಚಿತ್ರದ ಬಾ ಬಾ ನಾ ರೆಡಿ, ಹಾಡಿಗೆ ಅದ್ಬುತವಾಗಿ ನೃತ್ಯ ಮಾಡಿ ಮೋಡಿ ಮಾಡಿದರು.

ಶರಣ್ ಮೆರುಗು: ಬಳಿಕ ವೇದಿಕೆ ಆಗಮಿಸಿದ ನಟ ಶರಣ್, ಶಂಕರ್ ನಾಗ್ ಅಭಿನಯದ ಗೀತಾ ಚಿತ್ರದ ಜೊತೆಯಲಿ ಜೊತೆ ಜೊತೆಯಲಿ, ತಮ್ಮ ನಟನೆಯ ಅಧ್ಯಕ್ಷ ಚಿತ್ರದ ಕೈನಾಗೆ ಮೈಕ್ ಇಟ್ರೆ ನಾನ್ ಸ್ಟಾಪು ಭಾಷಣ, ರ‍್ಯಾಂಬೋ-2 ಚಿತ್ರದ ಚುಟು ಚುಟು ಅಂತೈತಿ ಹಾಡು ಹಾಡಿ ಯುವ ದಸರಾಗೆ ಮತ್ತಷ್ಟು ಮೆರುಗು ನೀಡಿದರು. ಇವರಿಗೆ ಗಾಯಕಿ ದಿವ್ಯಾ ರಾಮಚಂದ್ರ ಸಾಥ್ ನೀಡಿದರು.

ಬಳಿಕ ನಟ ಸಾಧು‌ ಕೋಕಿಲಾ ತಮ್ಮ ಹಾಸ್ಯದಿಂದ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. ನಟರಾದ ಅಜಯ್ ರಾವ್, ರಿಷಿ ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು