News Karnataka Kannada
Friday, May 03 2024
ಮೈಸೂರು

ಕವಿ ಮಾಗಬೇಕು ಆಗ ಕವಿತೆ ಬಾಗುತ್ತದೆ: ಬನ್ನೂರು ರಾಜು

Poet has to fade, then poetry bends: Bannur Raju
Photo Credit : By Author

ಮೈಸೂರು: ಯಾವುದೇ ರೀತಿಯ ಕಾವ್ಯಕ್ಕೂ ಒಂದು ಹದವಿದ್ದು ಕವಿಯಾದವನು ಕವಿತೆ ಕಟ್ಟುವ ಮೊದಲು ತಾನೂ ಹದಗೊಂಡು ಮಾಗಬೇಕು ಆಗ ಕವಿತೆ ಬಾಗುತ್ತದೆಂದೂ,ವಿಶೇಷವಾಗಿ ಹೇಗೆ ಬೇಕಾದರೂ ಬರೆಯಬಲ್ಲ ಛಾತಿ ಹಾಗು ಪದಗಳನ್ನು ಬೆಂಡೆತ್ತುವ ಕಲೆ ಕವಿಗಿರಬೇಕಾಗಿದ್ದು ಇದನ್ನು’ಕಾಶಿಗೌ’ ಕಾವ್ಯನಾಮದ ಕವಿ ಕಾಡ್ನೂರು ಶಿವೇಗೌಡರು ಸಿದ್ಧಿಸಿಕೊಂಡಿದ್ದಾರೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಶಿವರಾಂಪೇಟೆಯ ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ವತಿಯಿಂದ ದೇವರಾಜ ಮೊಹಲ್ಲಾದಲ್ಲಿರುವ ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ‘ ಕಾಶಿಗೌ ‘ ಕಾವ್ಯನಾಮದ ಕವಿ ಕಾಡ್ನೂರು ಶಿವೇಗೌಡರ ಆರದ ಅರುವತ್ತು ,ಮನದಾಳದ ನಾದ, ಒಡಲ ಮಾತು, ಒಳಗೊಂಡಂತೆ ಮೂರು ಕವನ ಸಂಕಲಗಳ ಲೋಕಾರ್ಪಣೆ ಮತ್ತು ಪ್ರಸ್ತುತ ವಯೋನಿವೃತ್ತಿ ಹೊಂದಿದ ಕಾಲೇಜಿನ ಪ್ರಾಂಶುಪಾಲರೂ ಆದ ಶಿವೇಗೌಡರ ಬೀಳ್ಕೊಡುಗೆ ಹಾಗೂ ಶುಭ ಹಾರೈಕೆ ಸಮಾರಂಭದಲ್ಲಿ ಭಾಗವಹಿಸಿ ಮೂರೂ ಕೃತಿಗಳ ಬಗ್ಗೆ ಮಾತನಾಡಿದ ಅವರು, ಈ ಮೂರೂ ಕೃತಿಗಳು ವಿದ್ಯಾರ್ಥಿಗಳ ನಾಡಿ ಮಿಡಿತವನ್ನು ಅದರಲ್ಲೂ ಬಹು ಮುಖ್ಯವಾಗಿ ಹಳ್ಳಿಗಾಡಿನ ಮಣ್ಣಿನ ಮಕ್ಕಳ ಅಯನವನ್ನು ಆಳವಾಗಿ ಅರಿತ ಅರಿವಿನ ಉಪನ್ಯಾಸಕರಾಗಿ , ಪ್ರಬುದ್ಧ ಬೋಧಕರಾಗಿ, ಪ್ರಾಂಶುಪಾಲ ರಾಗಿ ಸುಮಾರು ಮೂರೂವರೆ ದಶಕಗಳಿಂದಲೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿ ರುವ ಶಿವೇಗೌಡರ ಅನುಭವ ಮತ್ತು ಅನುಭಾವದ ದೇಸೀ ಕಾವ್ಯಕ್ಕೆ ಸಾಕ್ಷಿಗಲ್ಲುಗಳೆಂದರು.

ಶಿಕ್ಷಣ ಪರ ಕಾಳಜಿಯ, ಸಮಾಜಮುಖಿ ಚಿಂತನೆಯ ಸರಳ, ಸಜ್ಜನಿಕೆಯ, ಜನೋಪಯೋಗಿ ವ್ಯಕ್ತಿತ್ವದ ಕವಿ ಶಿವೇಗೌಡರು ಸಂಪೂರ್ಣ ಕಾವ್ಯಮುಖಿಯಾಗಿದ್ದು ಮನದಾಳದ ನಾದ ಮತ್ತು ಒಡಲ ಮಾತು ಹಾಗು ಆರದ ಅರುವತ್ತು ಕೃತಿಗಳ ಮೂಲಕ ಜನೋಪಯೋಗಿ ಕವಿತೆಗಳನ್ನು ರಚಿಸಿದ್ದು ಕನ್ನಡ ಕಾವ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಸುಮಾರು ಮೂರ್ನಾಲ್ಕು ದಶಕಗಳಿಂದಲೂ ಅವರೊಳಗೆ ಸುಪ್ತವಾಗಿ ಅಡಗಿದ್ದ ಕವಿತೆಗಳೆಲ್ಲವನ್ನೂ ಈಗ ಮುಕ್ತವಾಗಿ ಒಮ್ಮೆಗೇ ಹೊರ ಹಾಕಿದ್ದಾರೆ.ಕೇವಲ ಕೆಲವೇ ತಿಂಗಳಲ್ಲಿ ಹತ್ತು ಕೃತಿಗಳನ್ನು ಪ್ರಕಟಿಸಿ ಕಾಶಿಗೌ ಅವರು ಸಾಧನೆ ಮೆರೆದಿದ್ದಾರೆಂದ ಅವರು, ಪ್ರತಿಯೊಂದು ಕವಿತೆಗಳೂ ಒಂದಕ್ಕಿಂತ ಒಂದು ವಿಷಯ ವೈವಿಧ್ಯತೆಯಿಂದ ಚೆಂದವಾಗಿದ್ದು ನಿಸ್ಸಂಶ ಯವಾಗಿಯೂ ಈ ಮೂರೂ ಕೃತಿಗಳು ಕನ್ನಡ ಕಾವ್ಯ ಲೋಕದ ಗಮನ ಸೆಳೆಯ ಬಲ್ಲವು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮೈಸೂರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾದ ನಾಗಮಲ್ಲೇಶ್ ಅವರು, ಆರದ ಅರುವತ್ತು,ಮನದಾಳದ ನಾದ, ಒಡಲ ಮಾತು ಎಂಬ ಮೂರೂ ಕವನ ಸಂಲನಗಳನ್ನು ಲೋಕಾರ್ಪಣೆಗೊಳಿಸಿ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಕವಿ ಶಿವೇಗೌಡರ ಕಾವ್ಯ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ಪ್ರಕಾಶಕ ಡಿ.ಎನ್. ಲೋಕಪ್ಪ , ಮಹಾಜನ ಕಾಲೇಜಿನ ಉಪನ್ಯಾಸಕರಾದ ಕೋಟೆ ವೆಂಕಟೇಶ್, ಡಾ.ಎಚ್.ಎಂ.ಸ್ವಾಮಿಗೌಡ, ಡಾ. ಎಂ.ಬಾಲರಾಜು, ಹಿರಿಯ ಉಪನ್ಯಾಸಕಿ ಡಾ.ನಾಗಮ್ಮ , ಮೈಸೂರು ಮಹಾನಗರ ಪಾಲಿಕೆಯ ಸದಸ್ಯರೂ ಆದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಎಂ.ಪ್ರಮೀಳಾ ಭರತ್, ಹಿರಿಯ ಸದಸ್ಯರಾದ ವಿಘ್ನೇಶ್ವರ ವಿ. ಭಟ್, ಫೋಟೋ ರಾಜಗೋಪಾಲ್, ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಾದ ಡಾ.ರಮಾನಂದ್, ಸುದೀಪ್, ಶಿವಕುಮಾರ್, ಆನಂದ್, ಕೃಷ್ಣ, ಕೋಟೆ ವೆಂಕಟೇಶ್, ಎಂ.ವಿ. ಸುನೀತಾ, ಉಷಾ ಎಸ್. ಗೋಂದಳಿ, ಡಾ.ವಿ.ಶ್ರೀಮತಿ, ಡಿ.ಪ್ರಭಾವತಿ, ಎ.ಬಿ. ಸಬಿತಾ, ಎಂ.ಕೆ. ರಾಧಾ, ಸುಶೀಲಾ ವಿ.ಭಟ್ ಕುರ್ಸೆ, ವಿ.ಆನಂದ ಕುಮಾರ್, ಟಿ.ಎಂ.ನಾಗೇಶ್, ಪುಷ್ಪಲತಾ, ಎ.ಎಸ್.ಜಗದೀಶ್, ಎಂ.ಬಾಲರಾಜು, ಆನಂದ್ ಕುಮಾರ್, ಪ್ರಭುಸ್ವಾಮಿ, ಕೆ.ಇ. ಪುಟ್ಟಸ್ವಾಮಿಗೌಡ ಇನ್ನಿತರರು ಉಪಸ್ಥಿತರಿದ್ದರು. ಇದೇ ವೇಳೆ ಇಂದೇ ವಯೋನಿವೃತ್ತಿ ಹೊಂದಿದ ಕಾಲೇಜಿನ ಹಿರಿಯ ಉಪನ್ಯಾಸಕಿ ಸುಶೀಲ ವಿ.ಭಟ್ ಕುರ್ಸೆ ಅವರನ್ನೂ ಅಭಿನಂದಿಸಿ ಶುಭ ಹಾರೈಸಿ ಬೀಳ್ಕೊಡಲಾಯಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು