News Karnataka Kannada
Monday, May 06 2024
ಮೈಸೂರು

ಪಿರಿಯಾಪಟ್ಟಣ: ಸರ್ಕಾರಿ ಗೌರವದೊಂದಿಗೆ ಬಲರಾಮನ ಅಂತ್ಯಕ್ರಿಯೆ

Periyapatna: Balarama cremated with state honours
Photo Credit : By Author

ಪಿರಿಯಾಪಟ್ಟಣ: ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ 13 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬಲರಾಮ ಆನೆ ಅನಾರೋಗ್ಯದಿಂದ ನಿಧನವಾಗಿದ್ದು, ಸಾಂಪ್ರದಾಯಿಕವಾಗಿ ವಿಧಿ ವಿಧಾನದೊಂದಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಹುಣಸೂರು ವನ್ಯಜೀವಿ ವಲಯದ ಕಾರೆಕಟ್ಟೆ ಅರಣ್ಯ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಬಲರಾಮ ಆನೆಗೆ 67 ವರ್ಷ ವಯಸ್ಸಾಗಿದ್ದು ಏ.19 ರಿಂದ ಅನಾರೋಗ್ಯಕೀಡಾಗಿ ಆಹಾರ ನೀರು ಸೇವಿಸಿದರೆ ವಾಂತಿ ಮಾಡುತ್ತಿರುವುದಾಗಿ ಕಾವಾಡಿ ಮಾಹಿತಿ ನೀಡಿದ ವೇಳೆ ಪಶುವೈದ್ಯಾಧಿಕಾರಿಗಳು ಮತ್ತು ಆನೆಗಳ ಪ್ರಭಾರಕರು ಆನೆ ಪರಿಶೀಲನೆ ಮಾಡಿ ಚಿಕಿತ್ಸೆ ನೀಡಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಭೀಮನಕಟ್ಟೆ ಸಾಕಾನೆ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿತ್ತು.

ಪಶುವೈದ್ಯಾಧಿಕಾರಿಗಳು ಆನೆಯನ್ನು ಪರಿಶೀಲನೆ ಮಾಡುವಾಗ ಒಣಗಿದ ಮರದ ಚೂಪಾದ ಕವಟೆ ಸಿಕ್ಕಿದ್ದು ನಂತರ ಆನೆಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ಏ.27 ರಂದು ಬಲರಾಮ ಆನೆ ಸೇವಿಸಿದ ಆಹಾರವನ್ನು ವಾಂತಿ ಮಾಡುತ್ತಿರುವುದು ಕಂಡು ಬಂದಾಗ ತಜ್ಞ ಪಶುವೈದ್ಯಾಧಿಕಾರಿಗಳಾದ ಡಾ.ಚಿಟ್ಟಿಯಪ್ಪ, ಡಾ.ರಮೇಶ್, ಡಾ.ಮಧನ್, ಡಾ.ಯಶಸ್ ಮತ್ತು ಡಾ.ಅಬ್ದುಲ್ ರವರ ತಂಡ ಎಂಡೋಸ್ಕೋಪಿ ಮಾಡಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿದಾಗ ಬಲರಾಮ ಆನೆಗೆ ಕ್ಷಯ ರೋಗವಿರುವುದು ಪತ್ತೆಯಾಗಿದೆ. ಮೇ.1 ರಿಂದ ಯಾವುದೇ ಆಹಾರ ನೀರು ಸೇವಿಸದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೇ.7 ರ ಸಂಜೆ 5.15 ರ ಸಮಯ ಬಲರಾಮ ಆನೆ ಮೃತಪಟ್ಟಿದೆ.

ಮೇ.8 ರಂದು ಬೆಳಿಗ್ಗೆ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೈಸೂರಿನ ಅರಮನೆ ಪುರೋಹಿತರಿಂದ ಅಂತಿಮ ವಿಧಿ ವಿಧಾನ ಪೂಜೆ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.

ಈ ಸಂದರ್ಭ ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಾಲತಿ ಪ್ರಿಯ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಉಪ ಅರಣ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರಾದ ಹರ್ಷಕುಮಾರ್ ಚಿಕ್ಕನರಗುಂದ, ಹುಣಸೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ, ಸೌರಭ್ ಕುಮಾರ್, ಶರಣ ಬಸಪ್ಪ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಮೈಸೂರು ರಾಜ ಮನೆತನದ ಶೃತಿ ಕೀರ್ತಿದೇವಿ ಅರಸ್ ಹಾಗೂ ಸಿಬ್ಬಂದಿ, ಬಲರಾಮ ಆನೆ ಮಾವುತ ತಿಮ್ಮ ಹಾಗೂ ಕುಟುಂಬದವರು, ಕಾವಾಡಿ ಮಂಜುನಾಥ್, ಬಲರಾಮ ಆನೆ ಆರೈಕೆ ಮಾಡಿದ್ದ ಪಶುವೈದ್ಯಾಧಿಕಾ ಹಾಗೂ ಆನೆಗಳ ಪ್ರಭಾರಕರಾದ ಡಾ.ರಮೇಶ್‌, ಡಾ.ನಾಗರಾಜು ಹಾಗೂ ಡಾ.ಮುಜೀಬ್ ಮುಂತಾದವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು