News Karnataka Kannada
Friday, May 03 2024
ಮೈಸೂರು

ಮೈಸೂರು: ಸಾಹಿತ್ಯ ಕೃಷಿಗೆ ವಯಸ್ಸಿಗಿಂತ ಉತ್ಸಾಹ ಮುಖ್ಯ- ಬನ್ನೂರು ರಾಜು

Mysuru: Passion is more important than age for literary cultivation: Bannur Raju
Photo Credit : By Author

ಮೈಸೂರು: ನಮ್ಮಲ್ಲಿ ಬಹಳ ಮಂದಿ ಲೇಖಕ, ಲೇಖಕಿಯರು ನಲವತ್ತು, ಐವತ್ತರ ನಂತರದ ವಯೋಮಾನದಲ್ಲಿ ಬರವಣಿಗೆಯನ್ನು ಪ್ರಾರಂಭಿಸಿ ಸಾಹಿತ್ಯ ಲೋಕದಲ್ಲಿ ಅದ್ಭುತ ಸಾಧನೆಯನ್ನು ಮಾಡಿರುವವರುಂಟು. ಹಾಗಾಗಿ ಸಾಹಿತ್ಯ ಕೃಷಿಗೆ ವಯಸ್ಸಿಗಿಂತ ಬರೆಯುವ ಉತ್ಸಾಹ, ಹುಮ್ಮಸ್ಸು ಬಹುಮುಖ್ಯವೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.

ನಗರದ ನಿಮಿಷಾಂಬ ಬಡಾವಣೆಯಲ್ಲಿರುವ ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮುಕ್ತಕ ಕವಿ ಪರಿಷತ್ತಿನ ವತಿಯಿಂದ ನಡೆದ ಹಿರಿಯ ಕವಯತ್ರಿ ಎನ್.ಶಾಂತಕುಮಾರಿ ಅವರ ಚೊಚ್ಚಲ ಕೃತಿಯಾದ ‘ಹೊಸ ಬೆಳಕು’ ಕವನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ಸಾಹದ ಚಿಲುಮೆಯಾಗಿ ಬರೆಯುವ ತುಡಿತ ವನ್ನು ಹೊಂದಿರುವ ಶಾಂತಕುಮಾರಿ ಅವರು ತಮ್ಮ ಪ್ರತಿಭೆ ಮತ್ತು ಸದ್ಭಾವನಾ ಗುಣದಿಂದಲೇ ಸಾಹಿತ್ಯ ಸರಸ್ವತಿಯನ್ನು ಒಲಿಸಿ ಕೊಂಡಿದ್ದು ಇವತ್ತಿನ ಯುವ ಲೇಖಕ,ಲೇಖಕಿಯರಿಗೆ ಮಾದರಿಯಾಗಿದ್ದಾರೆಂದರು.

ಶಾಂತಕುಮಾರಿ ಅವರಂತಹ ಹಿರಿಯರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿ ಕೊಂಡು ಹೆಚ್ಚೆಚ್ಚು ಬರವಣಿಗೆ ಮಾಡಬೇಕು. ಏಕೆಂದರೆ ಹಿರಿಯರ ಮನಸ್ಸು ಮಾಗಿರುತ್ತದೆ. ಹಾಗೆಯೇ ವಯಸ್ಸು ಅನುಭವವನ್ನು ತಂದು ಕೊಟ್ಟಿರುತ್ತದೆ. ಹಾಗಾಗಿ ಮಾಗಿದ ಮನಸ್ಸು ಮತ್ತು ಅನುಭವದ ವಯಸ್ಸು ಇವೆರಡೂ ಸೇರಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಒಳಿತಿನ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅನುಭವದಿಂದ, ಅನುಭಾ ವದಿಂದ ಮಾಗಿದ ಸಾಹಿತ್ಯವು ಮಾಗಿದ ಹಣ್ಣಿನಷ್ಟೇ ರುಚಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಹಿರಿಯ ಕವಯತ್ರಿ ಶಾಂತಕುಮಾರಿ ಅವರಿಂದ ರಚಿಸಲ್ಪಟ್ಟ ‘ಹೊಸ ಬೆಳಕು’ ಕೃತಿ ಗಾತ್ರದಲ್ಲಿ ಪುಟ್ಟದಾದರೂ ಆಶಯದಲ್ಲಿ ದೊಡ್ಡದಾಗಿದ್ದು ಅವರ ಉತ್ಸಾಹಕ್ಕೆ ಕನ್ನಡಿಯಂತಿದೆ ಎಂದು ಹೇಳಿದರು.

ತುಮಕೂರಿನ ಖ್ಯಾತ ಕವಯತ್ರಿ ಕಮಲಾ ರಾಜೇಶ್ ಅವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಾಂತಕುಮಾರಿಯವರದ್ದು ಬಹುಮುಖ ಪ್ರತಿಭೆಯಾಗಿದ್ದು ಸಾಹಿತ್ಯದಷ್ಟೇ ಇತರೆ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆಂದು ಶ್ಲಾಘಿಸಿದರು. ‘ಹೊಸ ಬೆಳಕು’ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದ ಸುಪ್ರಸಿದ್ಧ ಮುಕ್ತಕ ಕವಿ ಎಂ.ಮುತ್ತುಸ್ವಾಮಿ ಅವರು, ಶಾಂತಕುಮಾರಿ ಅವರು ಉತ್ತಮ ಕವಯತ್ರಿ. ಇದಕ್ಕೆ ಇವರ ಚೊಚ್ಚಲ ಕೃತಿ ಹೊಸಬೆಳಕು ಸಾಕ್ಷಿಯಾಗಿದೆ ಎಂದು ಅದರಲ್ಲಿನ ಉತ್ತಮ ಕವಿತೆಗಳನ್ನು ವಾಚಿಸಿ ಸವಿವರವಾಗಿ ವಿಮರ್ಶಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರದ ಅಧ್ಯಕ್ಷ ಎಂ.ಪಿ.ಪ್ರಭುಸ್ವಾಮಿ ಅವರು ಮಾತನಾಡಿ, ಕವಯತ್ರಿ ಶಾಂತಕುಮಾರಿಯವರು ನಮ್ಮ ಕೇಂದ್ರದ ಸದಸ್ಯೆ ಎಂಬುದೇ ನಮಗೆ ಒಂದು ಹೆಮ್ಮೆ. ಇವರ ಬರವಣಿಗೆಗೆ ಮತ್ತು ಇನ್ನಿತರೆ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಸಿಗಬೇಕೆಂದರು.

ಹಿಮಾಲಯ ಫೌಂಡೇಶನ್ ಅಧ್ಯಕ್ಷ ಎನ್.ಅನಂತ ದೀಕ್ಷಿತ್ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್. ರಾಮಚಂದ್ರ ಸ್ವಾಮಿ, ನಾಗರಾಜು, ಯದುಗಿರಿ ಗೋಪಾಲನ್, ಭಾಗೀರತಿ, ಡಾ.ರುಕ್ಮಿಣಿ, ಜ್ಯೋತಿ, ನಾಗಮ್ಮ,ಪ್ರಭುಸ್ವಾಮಿ, ಗೋಪಿನಾಥ್, ರಾಮಯ್ಯ, ರಂಗರಾಜ್ ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು