News Karnataka Kannada
Friday, May 03 2024
ಮೈಸೂರು

ಮೈಸೂರು: ಎರಡು ವರ್ಷಗಳ ಬಳಿಕ ಚಾಮುಂಡಿಬೆಟ್ಟಕ್ಕೆ ಆಷಾಢದ ಕಳೆ

After two years, Chamundi Hill gets ashadha weeds
Photo Credit : By Author

ಮೈಸೂರು: ಈ ಬಾರಿಯಾದರೂ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿಯ ದರ್ಶನ ಮಾಡಲು ಅವಕಾಶ ಸಿಗುತ್ತಾ ಎಂದು ಕಾಯುತ್ತಿದ್ದ ಭಕ್ತರಿಗೆ ಮೈಸೂರು ಜಿಲ್ಲಾಡಳಿತ ಖುಷಿ ಸುದ್ದಿಯನ್ನೇ ನೀಡಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಆಷಾಢದ ಸಂಭ್ರಮ ಕಂಡು ಬಂದಿರಲಿಲ್ಲ, ಜತೆಗೆ ಜನರಲ್ಲಿ ಕೊರೊನಾದ ಭಯವೂ ಭೂತದಂತೆ ಕಾಡಿತ್ತು. ಆದರೆ ಈ ಬಾರಿ ಅದೆಲ್ಲವನ್ನು ಬದಿಗೊತ್ತಿ ಭಕ್ತರಿಗೆ ದೇವಿಯ ದರ್ಶನಕ್ಕೆ ಸ್ವಚ್ಛತೆ ಮತ್ತು ಸುರಕ್ಷತೆಯ ಪಾಲನೆಯೊಂದಿಗೆ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ಆಷಾಢದ ಕಳೆ ಚಾಮುಂಡಿಬೆಟ್ಟಕ್ಕೆ ಬಂದಂತಾಗಿದೆ.

ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಭೆ

ಈ ಬಾರಿ ಜು.1ರಂದು ಮೊದಲನೇ ಆಷಾಢ ಶುಕ್ರವಾರ, ಜು.8ರಂದು ಎರಡನೇ, ಜು. 15ರಂದು ಮೂರನೇ, ಜು20ರಂದು ಚಾಮುಂಡೇಶ್ವರಿ ವರ್ಧಂತ್ಯುತ್ಸವ ಮತ್ತು ಜು. 22ರಂದು ನಾಲ್ಕನೇ ಆ ಷಾಢ ಶುಕ್ರವಾರ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಪ್ರತಿನಿಧಿಗಳು, ಅಧಿಕಾರಿಗಳ ಪೂರ್ವ ಸಿದ್ಧತಾ ಸಭೆಯಲ್ಲಿ ನಾಲ್ಕು ಆಷಾಢ ಶುಕ್ರವಾರಗಳು, ವರ್ಧುಂತ್ಯುತ್ಸವದಲ್ಲಿ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

ಒಂದು ಲಕ್ಷಕ್ಕೂ ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, 2019ರ ಅಷಾಢ ಶುಕ್ರವಾರಗಳ ನಿಯಮಗಳಂತೆಯೇ ಆಷಾಢ ಶುಕ್ರವಾರದ ಕಾರ್ಯಕ್ರಮಗಳು ನಡೆಯಲಿದೆ. ಇನ್ನು ಈ ಹಿಂದೆ ಆಷಾಢ ಶುಕ್ರವಾರಗಳಲ್ಲಿ ಇದ್ದಂತೆಯೇ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರನ್ನು ಕೆಎಸ್‌ಆರ್‌ಟಿಸಿ ಬಸ್ ಮೂಲಕ ಕರೆದೊಯ್ಯಲಾಗುವುದು. ಲಲಿತ ಮಹಲ್ ಹೆಲಿಪ್ಯಾಡ್ ಆವರಣದ ಬದಲು, ಲಲಿತ ಮಹಲ್ ಪ್ಯಾಲೆಸ್ ಹೋಟೆಲ್ ಪಕ್ಕದಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಸೇರಿದ 18 ಎಕರೆ ಜಾಗದಲ್ಲಿ ವಾಹನ ನಿಲುಗಡೆ ಅವಕಾಶ ಕಲ್ಪಿಸಲಾಗುತ್ತದೆ.

ಎರಡು ಡೋಸ್ ಲಸಿಕೆ ಕಡ್ಡಾಯ

ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ 50 ಬಸ್ ನೀಡುವಂತೆ ಕೆಎಸ್‌ಆರ್‌ಟಿಸಿ ಡಿಸಿಗೆ ಸೂಚಿಸಲಾಗಿದೆ. ಭಕ್ತರಿಗೆ ಉಚಿತ ಪ್ರಯಾಣ ಇರುತ್ತದೆ. ಈ ಹಣವನ್ನು ದೇವಸ್ಥಾನದ ಆಡಳಿತ ಮಂಡಳಿ ಭರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಅಷಾಢ ಶುಕ್ರವಾರಗಳಂದು ಬೆಟ್ಟಕ್ಕೆ ಬರುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಅಥವಾ 72 ಗಂಟೆಯೊಳಗಿನ ನೆಗೆಟಿವ್ ವರದಿ ತರಬೇಕು. ಈ ಬಗ್ಗೆ 20 ತಂಡಗಳಲ್ಲಿ ಆರೋಗ್ಯ ಸಿಬ್ಬಂದಿ ಪರೀಕ್ಷೆ ನಡೆಸಲಿದ್ದಾರೆ. ಬೆಟ್ಟದ ಮಹಿಷಾಸುರ ಎದುರಿನ ಖಾಲಿ ಸ್ಥಳದಲ್ಲಿ ಸಾರ್ವಜನಿಕರು ಪ್ರಸಾದ ವಿತರಣೆಗೆ ಸಕಲ ಸಿದ್ಧತೆ ಕಲ್ಪಿಸಲಾಗುತ್ತಿದ್ದು, ಮಳೆ ಬಂದಾಗಲೂ ತೊಂದರೆಯಾಗದಂತೆ ಶಾಮಿಯಾನ ಅಳವಡಿಕೆ, ಪ್ರಸಾದ ವಿತರಿಸುವ ದಾನಿಗಳು ಜಿಲ್ಲಾಧಿಕಾರಿಗಳಿಂದ ಪಾಸ್ ಪಡೆದುಕೊಳ್ಳಬೇಕಾಗುತ್ತದೆ.

ಸಿಸಿ ಟಿವಿ ಕ್ಯಾಮರಾ ಅಳವಡಿಕೆ

ಸುರಕ್ಷತೆಯ ದೃಷ್ಟಿಯಿಂದ ಮೆಟ್ಟಿಲುಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುತ್ತಿದ್ದು, ಈಗಾಗಲೇ ದೇವಸ್ಥಾನದ ಸುತ್ತಮುತ್ತ ಕ್ಯಾಮರಾ ಅಳವಡಿಸಲಾಗಿದೆ. ಹಾಗೆಯೇ ಭಕ್ತರಿಗೆ ಚಾಮುಂಡೇಶ್ವರಿ ಭಕ್ತಿ ಪ್ರಧಾನವಾದ ಸಿನಿಮಾ, ಹಾಡುಗಳ ಪ್ರದರ್ಶಿಸಲಾಗುತ್ತದೆ. ದೇವಸ್ಥಾನದ ಆವರಣ, ರಸ್ತೆ ಹಾಗೂ ಚಾಮುಂಡಿಬೆಟ್ಟದ ಗ್ರಾಮದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಿಷ್ಟಾಚಾರದ ಅನ್ವಯಕ್ಕೆ ಒಳಪಡುವ ಗಣ್ಯರಿಗೆ ಅಷಾಢ ಶುಕ್ರವಾರಗಳಂದು ಪ್ರವೇಶ ನೀಡಲಾಗುವುದು. ಉಳಿದ ಯಾರ ವಾಹನಗಳಿಗೂ ಪ್ರವೇಶ ನೀಡದಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಇದೆಲ್ಲದರ ನಡುವೆ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ನಾಡಹಬ್ಬ ದಸರಾ ಮಹೋತ್ಸವದ ಅಭಿವೃದ್ಧಿ ಪ್ರಾಧಿಕಾರ ಮತ್ತು ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸಚಿವರು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ದಸರಾ ಉನ್ನತ ಮಟ್ಟದ ಸಭೆ

ಪ್ರತಿ ವರ್ಷದ ದಸರಾದಲ್ಲೂ ದಸರಾ ಪ್ರಾಧಿಕಾರ ರಚಿಸುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಲಾಗುತ್ತಿದೆ. ಪ್ರಾಧಿಕಾರ ರಚಿಸಿದರೆ ಕಾರ್ಯಕ್ರಮ ರೂಪಿಸಲು ಸುಲಭವಾಗುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜುಲೈ ಮೊದಲ ವಾರದಲ್ಲಿ 2022ರ ದಸರಾ ಉನ್ನತ ಮಟ್ಟದ ಸಭೆ ನಡೆಯಲಿದೆ. ಆ ವೇಳೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.

ಸಭೆಯಲ್ಲಿ ಮೇಯರ್ ಸುನಂದಾ ಫಾಲನೇತ್ರ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ, ಎಂಎಲ್‌ಸಿ ಸಿ.ಎನ್.ಮಂಜೇಗೌಡ, ಡಿಸಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಪೂರ್ಣಿಮಾ, ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ಎಡಿಸಿ ಮಂಜುನಾಥಸ್ವಾಮಿ ಮುಂತಾದವರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು