News Karnataka Kannada
Tuesday, May 07 2024
ಮೈಸೂರು

ಭಾರತೀಯ ಯೋಗಕ್ಕೆ ಜಾಗತಿಕ ಮನ್ನಣೆ: ಶಾಸಕ ದರ್ಶನ್ ಧ್ರುವನಾರಾಯಣ್

Indian Yoga gets global recognition: MLA Darshan Dhruvanarayan
Photo Credit : News Kannada

ನಂಜನಗೂಡು: ವಿದೇಶಗಳಿಂದ ಭಾರತಕ್ಕೆ ಬಂದು ಯೋಗ ಕಲಿತು ವಿದೇಶಗಳಲ್ಲಿ ಪಸರಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾರತೀಯ ಯೋಗ, ಧ್ಯಾನ, ಆಧ್ಯಾತ್ಮಕ್ಕೆ ಜಾಗತಿಕ ಮನ್ನಣೆಯಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವದ ಯೋಗ ದಸರಾ ಉಪಸಮಿತಿ ವತಿಯಿಂದ ಸೋಮವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸಾಮೂಹಿಕ ಯೋಗಾಭ್ಯಾಸ ಹಾಗೂ ಶಿವ ನಮಸ್ಕಾರದಲ್ಲಿ ಭಾಗವಹಿಸಿ ಮಾತನಾಡಿ, ನಾನು ಚಿಕ್ಕವನಾಗಿದ್ದಾಗ ಮೈಸೂರಿನ ಗೋಕುಲಂನಲ್ಲಿ ವಾಸವಾಗಿದ್ದೆ. ಆ ಸಂದರ್ಭದಲ್ಲಿ ಬೇರೆ ಬೇರೆ ದೇಶಗಳಿಂದ ಬರುತ್ತಿದ್ದ ವಿದೇಶಿಗರು ಮೈಸೂರಿನಲ್ಲಿ ಯೋಗ ಕಲಿತು ತಮ್ಮ ದೇಶದಲ್ಲಿ ಪಸರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ವ್ಯಾಪಕವಾಗಿದ್ದು, ಜಾಗತಿಕವಾಗಿ ನಮ್ಮ ಭಾರತೀಯ ಯೋಗ ಪದ್ಧತಿಗೆ ವಿಶ್ವ ಮನ್ನಣೆ ಸಿಕ್ಕಿದೆ ಎಂದರು.

ಆಯುಷ್ ಇಲಾಖೆಯ ಆಯುಕ್ತೆ ಡಾ.ಲೀಲಾವತಿ ಮಾತನಾಡಿ, ಆಯುರ್ವೇದ ಹಾಗೂ ಯೋಗ ಪದ್ಧತಿಗೂ ಅವಿನಾಭಾವ ಸಂಬಂಧವಿದೆ. ನಗರ ಪ್ರದೇಶಗಳಿಗೆ ಮಾತ್ರ ಯೋಗ ಸೀಮಿತವಾಗಬಾರದು. ಗ್ರಾಮೀಣ ಪ್ರದೇಶಗಳಿಗೂ ಅದರ ಮಹತ್ವದ ಅರಿವಾಗಬೇಕೆಂಬ ದೃಷ್ಟಿಯಿಂದ ಗ್ರಾಮೀಣ ಪ್ರದೇಶಗಳಲ್ಲಿರುವ ಆಯುಷ್ ಕ್ಷೇಮ ಕೇಂದ್ರಗಳಲ್ಲಿ ನಿತ್ಯ ಯೋಗ ತರಗತಿಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನುರಿತ ಯೋಗ ತರಬೇತುದಾರರನ್ನು ಇಲಾಖೆಯು ನೇಮಕ ಮಾಡಿಕೊಳ್ಳುತ್ತಿದೆ. ಆ ಮೂಲಕ ಹಳ್ಳಿಗಾಡಿನ ಜನರಿಗೂ ಯೋಗ ತಲುಪಿಸುವಲ್ಲಿ ಇಲಾಖೆಯು ಯಶಸ್ವಿಯಾಗಿದೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಜನರಿಗೆ ಯೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾಮೂಹಿಕ ಯೋಗಾಭ್ಯಾಸ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಾಮೂಹಿಕ ಶಿವ ನಮಸ್ಕಾರ ಕಾರ್ಯಕ್ರಮದಲ್ಲಿ ಮೈಸೂರು, ನಂಜನಗೂಡಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಕೆಂಪಿಸಿದ್ದನಹುಂಡಿ ಆಯುಷ್ ಕ್ಷೇಮ ಕೇಂದ್ರದ ನೂರಾರು ಯೋಗ ಪಟುಗಳು, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಸಾಮೂಹಿಕ ಶಿವ ನಮಸ್ಕಾರ ಮಾಡುವ ಮೂಲಕ ಗಮನ ಸೆಳೆದರು.

ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಶಿಕ್ಷಕಿ ವರಲಕ್ಷ್ಮಿ ಶಿವ ನಮಸ್ಕಾರವನ್ನು ನಡೆಸಿಕೊಟ್ಟರೆ, ಪ್ರಧಾನ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ಅವರು ಶಿವ ಷಡಕ್ಷರಿ ಮಂತ್ರದ ಪ್ರಭಾವಳಿ ಮಹತ್ವವನ್ನು ನೆರೆದಿದ್ದವರಿಗೆ ಮನದಟ್ಟು ಮಾಡಿದರು. ನಾಲ್ಕು ಸುತ್ತು ಸಾಮೂಹಿಕ ಶಿವ ನಮಸ್ಕಾರ ಮಾಡುವುದನ್ನು ಸ್ಥಳೀಯರು ಹಾಗೂ ದೇವಾಲಯಕ್ಕೆ ಆಗಮಿಸಿದ ಭಕ್ತರು ವೀಕ್ಷಿಸಿದರು.

ಇನ್ನು ತಾಲೂಕಿನ ಕೆಂಪಿಸಿದ್ದನಹುಂಡಿ ಆಯುಷ್ ಕ್ಷೇಮ ಕೇಂದ್ರದ ಮಹಿಳೆಯರು ಸಾಮೂಹಿಕ ಯೋಗ ನೃತ್ಯ ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆ ಪಡೆದರು. ಯೋಗ ದಸರಾ ಉಪಸಮಿತಿ ಅಧ್ಯಕ್ಷ ದೇವರಾಜು, ವಿಶೇಷಾಧಿಕಾರಿ ರಮ್ಯ, ಆಯುಷ್ ಜಿಲ್ಲಾ ಅಧಿಕಾರಿ ಡಾ.ಪುಷ್ಪ, ತಾಲೂಕು ಅಧಿಕಾರಿ ಡಾ.ಅಶೋಕ್‌ ಕುಮಾರ್, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಕಾರ್ಯದರ್ಶಿ ಎನ್.ಆರ್.ಗಣೇಶ್‌ಮೂರ್ತಿ, ಪ್ರತಾಪ್. ಉಪಸಮಿತಿ ಸದಸ್ಯರಾದ ವಿಷ್ಣುಪ್ರಿಯ, ರಫೀಕ್, ಚನ್ನಗಿರಿ, ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಸೇರಿದಂತೆ ಹಲವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು