News Karnataka Kannada
Monday, April 29 2024
ಮೈಸೂರು

ಲಕ್ಷ್ಮಣ ತೀರ್ಥ ನದಿ ಶುದ್ಧೀಕರಣಕ್ಕೆ ಕ್ರಮ: ರವಿ ಕುಶಾಲಪ್ಪ

Hunasuru
Photo Credit :

ಹುಣಸೂರು: ಪಟ್ಟಣದ ಮೂಲಕ ಹರಿಯುವ ಲಕ್ಷ್ಮಣ ತೀರ್ಥ ನದಿಯು ಸಂಪೂರ್ಣ ಕೊಳಚೆಯಾಗಿರುವುದರಿಂದ ಇದರ ಶುದ್ಧೀಕರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಭರವಸೆ ನೀಡಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಹುಟ್ಟಿ ನಾಗರಹೊಳೆ ಅಭಯಾರಣ್ಯದ ಮೂಲಕ ಹರಿದು ಹುಣಸೂರು ಪಟ್ಟಣದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿ ಸಂಪೂರ್ಣ ಮಲೀನವಾಗಿದ್ದು, ಇದಕ್ಕೆ ಸುಮಾರು ಹಳ್ಳಿಗಳ ಕೊಳಚೆ ನೀರು ಸೇರುತ್ತಿದ್ದು, ಪಟ್ಟಣದ ಕೊಳಚೆ ನೀರು ಕೂಡ ಸೇರುವುದರಿಂದ ನೀರು ಪಾಚಿಕಟ್ಟಿ ಅಸಹ್ಯ ಹುಟ್ಟಿಸುತ್ತಿದೆ. ಹೀಗಾಗಿ ಈ ನದಿಯನ್ನು ಶುದ್ಧೀಕರಣಗೊಳಿಸುವ ಸಂಬಂಧ ಸಾರ್ವಜನಿಕರು, ಸಂಘ ಸಂಸ್ಥೆಗಳು ಮನವಿ ಮಾಡುತ್ತಲೇ ಬಂದಿದ್ದು, ಈ ಸಂಬಂಧ ನದಿಯನ್ನು ಪರಿಶೀಲಿಸಿದ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರು ನದಿಯ ಅವಸ್ಥೆ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೇನೆ. ಈ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆಗೊಳಿಸಿ ಕಾಲಮಿತಿಯೊಳಗೆ ನದಿಗೆ ಕಾಯಕಲ್ಪ ನೀಡಲಾಗುವುದೆಂದರು.

ಲಕ್ಷ್ಮಣತೀರ್ಥ ನದಿ ಪಾತ್ರದ ಗ್ರಾ.ಪಂ. ವ್ಯಾಪ್ತಿಯಲ್ಲಿ ನದಿ ಸಂರಕ್ಷಣೆಗಾಗಿ ಸಭೆ ನಡೆಸಿ ಅವರ ಬೇಡಿಕೆಗನುಗುಣವಾಗಿ ಕಾರ್ಯಕ್ರಮ ರೂಪಿಸುವುದು ಹಾಗೂ ನದಿ ಪಾತ್ರದಲ್ಲಿ ಮರಗಿಡ ಬೆಳೆಸುವ ಮೂಲಕ ನದಿಗೆ ಜೀವ ತುಂಬುವ ಕೆಲಸ ಮಾಡುವಂತೆಯೂ ಹೇಳಿದ ಅವರು, ಪಶ್ಚಿಮಘಟ್ಟ ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಪಾತ್ರ ಹಿರಿದು. ವನ್ಯಜೀವಿಗಳಿಗೆ ಅವಶ್ಯವಾದ ಮರಗಿಡಗಳನ್ನು ಬೆಳೆಸುವುದರಿಂದ ಮಾನವ-ವನ್ಯಜೀವಿ ಸಂಘರ್ಷಕ್ಕೆ ತಡೆಗಟ್ಟಬಹುದು. ಇನ್ನು ಸಾಮಾಜಿಕ ಅರಣ್ಯ ಇಲಾಖೆವತಿಯಿಂದ ಅವಶ್ಯವಿರುವ ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಜಿ.ಪಂನವರು ಸಭೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಹೇಳಿದರು.

ಹುಣಸೂರು ಶಾಸಕ ಮಂಜುನಾಥ್ ಮಾತನಾಡಿ ಲಕ್ಷ್ಮಣತೀರ್ಥ ನದಿಗೆ ನಗರ ಹಾಗೂ ತಾಲೂಕಿನ 15ಕ್ಕೂ ಹೆಚ್ಚು ಹಳ್ಳಿಗಳಿಂದ ಕಲುಷಿತ ನೀರು ಸೇರುತ್ತಿದ್ದು, ಕಳೆದ ಒಂಬತ್ತು ವರ್ಷದ ಹಿಂದೆ ಸೇವ್ ಅವರ್ ಅರ್ಥ್ ಕ್ಲಬ್ ಇದರ ವಿರುದ್ದ ನ್ಯಾಯಾಲಯ ಮೆಟ್ಟಿಲೇರಿದ್ದರು. ಈ ಸಂಬಂಧ ತಾವು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಕೊಳಚೆ ನೀರು ನದಿ ಸೇರದಂತೆ ಎರಡು ಕಡೆ ತಡೆಗೋಡೆ ನಿರ್ಮಿಸಿ ಕಲುಷಿತ ನೀರು ಸೇರದಂತೆ ಕಾಮಗಾರಿ ನಡೆಸಲು 41 ಕೋಟಿ ವೆಚ್ಚದ ಯೋಜನೆ ಮೂಲಕ ಕಲುಷಿತ ನೀರನ್ನು ಶುದ್ದಗೊಳಿಸಿ 800 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿಸುವ ಯೋಜನೆ ಮಂಜೂರಾಗಿತ್ತು. ಆದರೆ ಸರಕಾರ ಬದಲಾದ ನಂತರ ವಾಪಸ್ ಪಡೆಯಿತೆಂದು ಹೇಳಿದರಲ್ಲದೆ, ತಕ್ಷಣಕ್ಕೆ ಕೆ.ಡಬ್ಲೂ.ಎಸ್ ವತಿಯಿಂದ ಇದೀಗ 28 ಕೋಟಿ ವೆಚ್ಚದಡಿ ನಗರದ ಎರಡು ಕಡೆ ಕಲುಷಿತ ನೀರಿನ ಶುದ್ದೀಕರಣ ಘಟಕ ಸ್ಥಾಪಿಸುವ ಯೋಜನೆ ರೂಪಿಸಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ನದಿಗೆ ಸಂಪೂರ್ಣ ಕೊಳಚೆ ನೀರು ತಡೆಗಟ್ಟಲು ಸುಮಾರು 70 ಕೋಟಿ ರೂ ಅನುದಾನ ಬೇಕಿದ್ದು, ಸರಕಾರದ ಜೊತೆ ಚರ್ಚಿಸಿ ಲಕ್ಷ್ಮಣತೀರ್ಥವನ್ನು ಜೀವಂತ ನದಿಯನ್ನಾಗಿಸಬೇಕೆಂದು ಮನವಿ ಮಾಡಿದರು.

ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಜಿಲ್ಲಾಧಿಕಾರಿ ಬಗಾದಿ ಗೌತಮ್,ಜಿ.ಪಂ ಸಿಇಒ ಯೋಗೀಶ್, ನಗರಸಭಾಧ್ಯಕ್ಷೆ ಸೌರಭಸಿದ್ದರಾಜು, ಉಪಾಧ್ಯಕ್ಷ ದೇವನಾಯಕ, ಉಪವಿಭಾಗಾಧಿಕಾರಿ ವರ್ಣಿತ್ ನೇಗಿ, ನಗರಸಭೆ ಆಯುಕ್ತ ರಮೇಶ್, ಎಇಇ ಮಂಜುನಾಥ್, ಕೊಳಚೆ ನಿರ್ಮೂಲನಾ ಮಂಡಳಿಯ ಇಇ ನರೇಂದ್ರಬಾಬು ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು